ನದಿ ಇಂಗಳಗಾಂವ ವಿದ್ಯಾರ್ಥಿಗಳಿಗೆ ಇಲ್ಲ ರಾಷ್ಟ್ರಗೀತೆ ಹಾಡುವ ಭಾಗ್ಯ ; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ
ಅಥಣಿ : ಸುಂದರವಾದ ಶಾಲಾ ಕಟ್ಟಡ ಇದೆ, ವಿಶಾಲವಾದ ಆವರಣ ಇದೆ ಆದರೆ ಆವರಣದ ಒಳಗೆ ಒಂದು ಹೆಜ್ಜೆ ಇಡಲು ಸಾಧ್ಯವಿಲ್ಲ. ಸುತ್ತಲೂ ಮಳೆ ನೀರು ಆವರಿಸಿ ಕೆಸರು ತುಂಬಿದ್ದು ವಿದ್ಯಾರ್ಥಿಗಳಿಗೆ ಬೆಳಗಿನ ರಾಷ್ಟ್ರಗೀತೆ ಹಾಡಲೂ ಅವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಈ ಅವ್ಯವಸ್ಥೆ ಆಗರ ಇರುವುದು ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕಥೆ. ಇಡೀ ತಾಲೂಕಿಗೆ ಮಾದರಿ ಆಗಬೇಕಿದ್ದ ಶಾಲೆಯ ಮಕ್ಕಳಿಗೆ ಸಧ್ಯ ಬೆಳಗಿನ ಪ್ರೇಯರ್ ಹಾಗೂ ಆಟೋಟ ನಡೆಸದ ಸ್ಥೀತಿ ಇದೆ. ವಿಧಿಇಲ್ಲದೆ ಮಕ್ಕಳು ತರಗತಿಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಆವರಣದಲ್ಲಿ ಮಳೆ ನೀರು ನಿಂತ ಪರಿಣಾಮ ಎಲ್ಲೆಡೆಯೂ ಕೆಸರು ತುಂಬಿದೆ. ಮಕ್ಕಳು ಮೈ ಮರೆತು ಆವರಣದಲ್ಲಿ ಕಾಲಿಟ್ಟರೆ ಸೊಂಟ ಮುರಿದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರು ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಕುರಿತು ಅಧಿಕಾರಿಗಳು ಗಮನಸಹರಿಸಿ ಕೂಡಲೇ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ವಿದ್ಯಾರ್ಥಿಗಳು ಬೆಳಗಾವಿ ವಾಯ್ಸ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.


