ಸಹೋದರರ ಭ್ರಾತೃತ್ವ ಎಂದೂ ಮರೆಯಲಾಗದು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಸಹೋದರರಿಗೆ ರಾಕಿ ಕಟ್ಟಿ, ರಕ್ಷಾ ಬಂಧನ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿರು.
ಸೋಮವಾರ ನಗರದ ಗೃಹ ಕಚೇರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ರಾಕಿ ಕಟ್ಟಿ ಶುಭ ಹಾರೈಸಿದರು. ಅಕ್ಕನಿಂದ ಆಶಿರ್ವಾದ ಪಡೆದ ಹಟ್ಟಿಹೊಳಿ ಅವರು ಶುಭಾಶಯ ವಿನಿಮಯ ಮಾಡಿಕೊಂಡರು.
ಬೆಳಗ್ಗೆಯಿಂದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರ, ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ವಿವಿಧೆಡೆಯಿಂದ ಸಹೋದರ ಬಂಧುಗಳು ಸಚಿವರ ನಿವಾಸಕ್ಕೆ ಆಗಮಿಸಿದರು. ಸರತಿ ಸಾಲಿನಲ್ಲಿ ಬಂದ ಎಲ್ಲ ಸಹೋದರರಿಗೆ ಅತ್ಯಂತ ಪ್ರೀತಿಯಿಂದ ರಾಕಿ ಕಟ್ಟಿ; ಸಿಹಿ ತಿನಿಸಿ ಸಂಭ್ರಮಿಸಿದರು. ಈ ಸಂಭ್ರಮದ ಕಾರ್ಯಕ್ರಮವು ಮಧ್ಯಾಹ್ನದವರೆಗೂ ನಿರಂತರವಾಗಿ ನಡೆಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಸಹೋದರರಿಗಾಗಿ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ವರ್ಷವನ್ನು ಬಿಟ್ಟರೆ, ಇನ್ನಿಳಿದಂತೆ ಎಲ್ಲ ವರ್ಷಗಳಲ್ಲೂ ಅತ್ಯಂತ ಸಂತೋಷದಿಂದ ಇಡೀ ಕ್ಷೇತ್ರದ ನನ್ನೆಲ್ಲ ಸಹೋದರರಿಗೆ ರಾಕಿ ಕಟ್ಟಿಕೊಂಡು ಬರುತ್ತಿದ್ದೇನೆ ಎಂದರು.
ನಾವು ಐವರು ಅಕ್ಕ ತಂಗಿಯರು; ನಮಗೆ ಒಬ್ಬನೇ ಒಬ್ಬ ಕೊನೆಯ ತಮ್ಮ. ದೇವರು ನಮಗೆ ಒಳ್ಳೆಯ ಆಶೀರ್ವಾದ ಮಾಡಿದ್ದಾನೆ. ಅಕ್ಕ , ತಮ್ಮನಿಗೆ ರಕ್ಷಣೆ ಮಾಡಿದರೆ; ತಮ್ಮ ಅಕ್ಕನಿಗೆ ರಕ್ಷಣೆ ಮಾಡುತ್ತಾನೆ. ಇದು ಈ ಹಬ್ಬದ ವಿಶೇಷತೆಯೂ ಹೌದು. ಇಡೀ ಕ್ಷೇತ್ರದ ಎಲ್ಲ ಅಣ್ಣ-ತಮ್ಮಂದಿರ ಜೊತೆ ಅತ್ಯಂತ ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಿಕೊಂಡಿದ್ದೇವೆ ಎಂದು ಹೇಳಿದರು.
ಸಚಿವರಾದ ಮೇಲೆ ಎರಡನೇ ಬಾರಿಗೆ : ಸಚಿವರಾದ ಬಳಿಕ ಇದು ಎರಡನೇ ಬಾರಿಗೆ ಕ್ಷೇತ್ರದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಬಿಡುವಿಲ್ಲದ ಸಂದರ್ಭವಾದರೂ; ಇಂತಹ ವಿಶೇಷತೆಯನ್ನು, ಪ್ರೀತಿ-ವಿಶ್ವಾಸವನ್ನು ಮರೆಯಲಾಗದು; ನಮ್ಮ ಸಂಬಂಧಗಳೂ ಮತ್ತಷ್ಟು ಸಮೃದ್ಧಿಯಾಗುತ್ತವೆ ಎಂದು ಸಚಿವರು ಹೇಳಿದರು.
ಕ್ಷೇತ್ರದಲ್ಲಿ ಸುಖ-ಸಮೃದ್ಧಿ ತುಂಬಿ ತುಳುಕಲಿ : ಭಾರತೀಯರಲ್ಲಿ ರಕ್ಷಾ ಬಂಧನದಂತಹ ಹಬ್ಬ ಹರಿದಿನಗಳು ಸಂಸ್ಕಾರ, ಸಂಸ್ಕೃತಿಯನ್ನು ಇನ್ನು ಮುಂದೆಯೂ ತೆಗೆದುಕೊಂಡು ಹೋಗುವುದಕ್ಕೆ ಇದೊಂದು ಸುದೈವ. ಇದೇ ವೇಳೆ, ನಾಡಿಗೆ ಒಳ್ಳೆಯ ಮಳೆ; ಬೆಳೆ ಬಂದು ಎಲ್ಲೆಡೆ ಸಮೃದ್ಧಿಯಾಗಲಿ; ಸುಖ -ಸಮೃದ್ಧಿ ತುಂಬಿ ತುಳಕಲಿ; ನನ್ನೆಲ್ಲ ಅಣ್ಣ-ತಮ್ಮಂದಿರಿಗೆ ದೇವರು ಒಳ್ಳೆಯ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಸಚಿವರು ಕೋರಿದರು.
ರಕ್ಷಾ ಬಂಧನದ ವೇಳೆ ಸಂಭ್ರಮ ಹಂಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು, ರಕ್ಷಾ ಬಂಧನದಂದು ಅಕ್ಕ ರಾಕಿ ಕಟ್ಟಿ; ಶುಭ ಹಾರೈಸಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಸೌಭಾಗ್ಯ. ಇಂತಹ ಅಕ್ಕನನ್ನು ಪಡೆದಿರುವುದಕ್ಕೆ ಭಗವಂತನಲ್ಲಿ ಸದಾ ಚಿರ ಋಣಿಯಾಗಿರುತ್ತೇನೆ ಎಂದರು.
ಇಂದು ನಮ್ಮ ಸಹೋದರಿ, ಕ್ಷೇತ್ರದ ಜನಪ್ರಿಯ ಶಾಸಕರಾಗಿ, ನಮ್ಮ ರಾಜ್ಯದ ಸಚಿವರಾಗಿ, ಅದೇ ರೀತಿ ಕ್ಷೇತ್ರದ ಮಗಳಾಗಿ, ಜನರ ಸೇವೆ ಮಾಡುತ್ತಿರುವುದು ಬಹಳ ಖುಷಿ ತಂದಿದೆ. ಅವರು ನಡೆದು ಬಂದ ಹಾದಿಯನ್ನು ನೋಡಿದರೆ, ಬಹಳ ಹೆಮ್ಮೆ ಅನಿಸುತ್ತದೆ. ಅಕ್ಕನೇ ನಮ್ಮೆಗೆಲ್ಲ ಸ್ಫೂರ್ತಿ. ಅವರು ಹಾಕಿಕೊಟ್ಟ ದಾರಿಯಲ್ಲಿ ಸದಾ ಮುನ್ನೆಡೆಯುತ್ತೇನೆ ಎಂದು ಈ ವೇಳೆ ಅವರು ವಾಗ್ದಾನ ಮಾಡಿದರು.
ನಮ್ಮ ಕುಟುಂಬ ನಮಗೆ ಹೆಮ್ಮೆ ಅನಿಸುತ್ತದೆ. ನನಗೆ ಐವರು ಸಹೋದರಿಯರು, ನಾನು ಆರನೇಯವನು; ಇಂತಹ ಅಪೂರ್ವ ಸಹೋದರಿಯರ ಪ್ರೀತಿ, ವಾತ್ಸಲ್ಯ ಪಡೆದಿರುವುದೇ ನನಗೆ ಪುಣ್ಯ. ನಾವೆಂದೂ ಇಂತಹ ದಿನಗಳು ಬರುತ್ತವೆಂದು ಕನಸು ಕಂಡವರಲ್ಲ.
ದೇವರ ಆಶೀರ್ವಾದ, ಸುಮಾರು 25 ವರ್ಷಗಳಿಂದ ಅಕ್ಕ ಪಟ್ಟವಂತಹ ಕಷ್ಟ ಅಷ್ಟಿಷ್ಟಲ್ಲ. ರಾಜಕೀಯ ಸಂಘರ್ಷ, ಛಲದ ಹೋರಾಟದಿಂದಲೇ ಸಾಧನೆ ಮಾಡಿದಂತಹ ಗಟ್ಟಿಗಿತ್ತಿ. ಅವರನ್ನು ನೋಡಿದರೆ ನಮಗೆಲ್ಲ ಹೆಮ್ಮೆ. ಇಡೀ ರಾಜ್ಯದ ಎಲ್ಲ ಮಹಿಳೆಯರಿಗೂ ದೊಡ್ಡ ಸ್ಫೂರ್ತಿ. ಜೀವನಪರ್ಯಂತ ಅವರು ಹಾಕಿಕೊಟ್ಟ ಮಾರ್ಗದಲ್ಲಿ; ಅವರು ಹೇಳಿದಂತೆ ನಡೆಯುತ್ತೇನೆಂದು ಹೇಳಿದರು.


