ಅಥಣಿ : ಅಧಿಕಾರಿಗಳಿಗೆ ಸಿಇಒ ರಾಹುಲ್ ಶಿಂಧೆ ಖಡಕ್ ವಾರ್ನಿಂಗ್…!
ಅಥಣಿ : ಗ್ರಾಮೀಣ ಭಾಗದಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಒದಗಿಸುವ ಮೂಲಕ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಜನರಿಗೆ ತ್ವರಿತವಾಗಿ ಸರಕಾರದ ಸೌಲಭ್ಯ ಒದಿಸುವಂತೆ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಅಥಣಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಇವರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಹಾಗೂ ಆರ್ ಓ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನರೇಗಾ ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸುವುದು. ಜನ ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗಬಾರದು. ಅವರಿಗೆ ಸ್ವ-ಗ್ರಾಮದಲ್ಲಿ ಉದ್ಯೋಗ ನೀಡಬೇಕು. ಈ ಕುರಿತು ಅಧಿಕಾರಿಗಳು ಸಮರ್ಪಕ ಕಾರ್ಯ ನಿರ್ವಹಿಸಬೇಕು ಎಂದರು.
ಬರುವ ಎಪ್ರಿಲ್ 15. ರ ಒಳಗಾಗಿ ಪ್ರತಿಯೊಬ್ಬ ವಿಕಲಚೇತನರಿಗೆ ಜಾಬ್ ಕಾರ್ಡ್ ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅಥಣಿ ಗ್ರಾಮೀಣ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಕಲಚೇತನರಿಗೆ ಜಾಬ್ ಕಾರ್ಡ್‌ಗಳನ್ನು ವಿತರಿಸಿದರು. ನಂತರ ಪಟ್ಟಣದ ಸರಕಾರಿ ಆಸ್ಪತ್ರೆಗೆ ಭೇಟಿನೀಡಿ ಅಲ್ಲಿನ ಮಾತ್ರೆ ಸೇರಿದಂತೆ ವೈದ್ಯಕೀಯ ಉಪಕರಣ ವೀಕ್ಷಿಸಿದರು. ಆಯುಷ್ಮಾನ ಭಾರತ್ ಆರೋಗ್ಯ ಮೀತ್ರ ವಿಭಾಗಕ್ಕೆ ಬೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು.
ಝಂಜರವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಅಥಣಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಮತ್ತು ಕಾಗವಾಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ, ಅಥಣಿ ತಹಶೀಲ್ದಾರರು ಸಿದ್ದರಾಯ ಭೋಸಗಿ,
ಕಾಗವಾಡ ತಹಶೀಲ್ದಾರ ಆರ್.ಆರ್. ಬುರ್ಲಿ, ಕಾರ್ಯನಿರ್ವಾಹಕ ಅಭಿಯಂತರ ಪಾಂಡುರಂಗ ಜೋಶಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಪ ವಿಭಾಗ ಅಥಣಿ ರವೀಂದ್ರ ಮುರಗಾಲಿ, ಅಥಣಿ ಮತ್ತು ಕಾಗವಾಡ ತಾಪಂ ಎಲ್ಲ ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಎಲ್ಲ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದ್ದಿ ವರ್ಗದವರು ಉಪಸ್ಥಿತರಿದ್ದರು.


