Select Page

Advertisement

ಸವದತ್ತಿ ಘಟನೆಗೆ ಸಿಎಂ ಆಕ್ರೋಶ ; “ದಯವೇ ಧರ್ಮದ ಮೂಲವಯ್ಯ” ಎಂದು ಹೇಳಿದ್ದೇಕೆ…?

ಸವದತ್ತಿ ಘಟನೆಗೆ ಸಿಎಂ ಆಕ್ರೋಶ ; “ದಯವೇ ಧರ್ಮದ ಮೂಲವಯ್ಯ” ಎಂದು ಹೇಳಿದ್ದೇಕೆ…?

ಬೆಳಗಾವಿ : ಮುಸ್ಲಿಂ ಶಿಕ್ಷಕನನ್ನು ಎತ್ತಂಗಡಿ ಮಾಡುವ ಉದ್ದೇಶದಿಂದ ಶಾಲಾ ಮಕ್ಕಳು ಕುಡಿಯುವ ನೀರಿಗೆ ಕೀಟನಾಶಕ ಹಾಕಿದ್ದ ಪ್ರಕರಣ ಖಂಡಿಸಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.‌

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇವರು. ಧಾರ್ಮಿಕ ಮೂಲಭೂತವಾದ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಮಾಡಿಸಬಲ್ಲುದು ಎಂಬುದಕ್ಕೆ ಪುಟ್ಟಮಕ್ಕಳ ಮಾರಣಹೋಮಕ್ಕೆ ಕಾರಣವಾಗಬಹುದಾಗಿದ್ದ ಈ ಘಟನೆಯೇ ಸಾಕ್ಷಿ.

“ ದಯೆಯೇ ಧರ್ಮದ ಮೂಲವಯ್ಯ” ಎಂದು ಸಾರಿದ ಶರಣರ ನಾಡಿನಲ್ಲಿ ಈ ಮಟ್ಟಿನ ಕೌರ್ಯ, ದ್ವೇಷ ಹುಟ್ಟಲು ಸಾಧ್ಯವೇ? ಎಂಬುದನ್ನು ಈ ಕ್ಷಣಕ್ಕೂ ನನ್ನಿಂದ ನಂಬಲಾಗುತ್ತಿಲ್ಲ.

ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರು ಒಮ್ಮೆ ತಮ್ಮ‌ ಆತ್ಮವಿಮರ್ಷೆ ಮಾಡಿಕೊಳ್ಳಲಿ. ಈ ಘಟನೆಯ ಹೊಣೆಯನ್ನು ಪ್ರಮೋದ್ ಮುತಾಲಿಕ್ ಹೊರುವರೇ? ವಿಜಯೇಂದ್ರ ಹೊರುವರೇ?

ಆರ್.ಅಶೋಕ್ ಹೊರುವರೇ? ಇಂಥವರು ಮಾಡುವ ಸಮಾಜಘಾತುಕ ಕೃತ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ನಾಯಕರು ಈಗ ಮುಂದೆ ಬಂದು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.

ಎಲ್ಲ ಬಗೆಯ ಮತೀಯವಾದ, ಮೂಲಭೂತವಾದಿತನಗಳು ಮನುಷ್ಯ ಸಮಾಜಕ್ಕೆ ಅಪಾಯಕಾರಿ. ದ್ವೇಷ ಭಾಷಣಗಳು, ಕೋಮು ಗಲಭೆಗಳ ತಡೆಗಾಗಿಯೇ ನಾವು ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ, ಅಂಥವರ ವಿರುದ್ಧ ಕಾನೂನಿನ ಪರಿಧಿಯೊಳಗೆ ಸಾಧ್ಯವಾದ ಎಲ್ಲಾ ಕ್ರಮವನ್ನು ವಹಿಸುತ್ತಿದ್ದೇವೆ.

ನಮ್ಮ ಎಲ್ಲಾ ಪ್ರಯತ್ನಗಳು ಫಲ ಕೊಡಬೇಕಾದರೆ ಸಾರ್ವಜನಿಕರೂ ಇಂಥಾ ಶಕ್ತಿಗಳ ವಿರುದ್ಧ ಧ್ವನಿಯೆತ್ತಬೇಕು, ಪ್ರತಿರೋಧ ಒಡ್ಡಬೇಕು, ದೂರು ದಾಖಲಿಸಬೇಕು. ನನಗೆ ಈಗಲೂ ನಂಬಿಕೆಯಿದೆ, ಕೋಮುವಾದಿಗಳ ಸಂಖ್ಯೆಗಿಂತ ಕೂಡಿ ಬಾಳಬೇಕೆಂದು ಬಯಸುವ ಜನರ ಸಂಖ್ಯೆ ನೂರು ಪಟ್ಟು ಹೆಚ್ಚಿದೆ.

ಮಕ್ಕಳ ಹತ್ಯಾಕಾಂಡ ನಡೆಸುವ ದುಷ್ಟ ಹುನ್ನಾರವನ್ನು ಭೇದಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆಗಳು. ಇಂಥ ಹೀನಕೃತ್ಯ ಎಸಗಿದ ದುರುಳರಿಗೆ ನ್ಯಾಯ ವ್ಯವಸ್ಥೆ ತಕ್ಕಶಿಕ್ಷೆ ನೀಡಲಿದೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.‌

ಏನಿದು ಪ್ರಕರಣ : ಶಾಲಾ ಮುಖ್ಯ ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸುವ ಉದ್ದೇಶದಿಂದ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಸೇರಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿತ್ತು.

ಹೂಲಿಕಟ್ಟಿ ‌ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು ಮುಖ್ಯ ಶಿಕ್ಷಕ‌ ಸುಲೇಮಾನ್ ಗೋರಿನಾಯಕ್ ಕೆಲಸ ಮಾಡುತ್ತಿದ್ದಾರೆ. ಇವರನ್ನು ಎತ್ತಂಗಡಿ ‌ಮಾಡಿಸುವ ಉದ್ದೇಶದಿಂದ
ಗ್ರಾಮದ ಸಾಗರ್ ಪಾಟೀಲ್ ಎಂಬಾತ ಕೃಷ್ಣಾ ಮಾದರ್ ಎಂಬುವವನ ಕಡೆಯಿಂದ ಕೀಟನಾಶಕ ಪಡೆದು ಮಕ್ಕಳು ನೀರು ಕುಡಿಯುವ ಟ್ಯಾಂಕ್ ಗೆ ಬೆರೆಸಿದ್ದರು.

ಕಳೆದ ಜುಲೈ 14 ರಂದು ಕೀಟನಾಶಕ ಬೆರೆಸಿದ್ದ ನೀರು ಕುಡಿದು
ಅಸ್ವಸ್ಥರಾಗಿದ್ದ 11 ಮಕ್ಕಳನ್ನು‌ ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.‌ ಸಧ್ಯ ಈ ‌ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಿಗೆ ಕೀಟನಾಶಕ ‌ಬೆರೆಸಿದ್ದ ಪ್ರಮುಖ ಆರೋಪಿ ಸಾಗರ್ ಪಾಟೀಲ್, ಕೃಷ್ಣಾ ಮಾದರ್, ಹಾಗೂ ನಾಗನಗೌಡ ಪಾಟೀಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.‌‌

Advertisement

Leave a reply

Your email address will not be published. Required fields are marked *

error: Content is protected !!