ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಾಹುಕಾರ್ ; ಜೋರಾಯ್ತ ದಲಿತ ಸಿಎಂ ಬೇಡಿಕೆ…?
ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದಾರೆ. ಸಧ್ಯ ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಕಾಲ ಸನ್ನಿಹಿತವಾಯಿತಾ ಎಂಬ ಮಾತು ಜೋರಾಗಿವೆ.
ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಸೇರಿದಂತೆ ಸ್ವಪಕ್ಷದ ನಾಯಕರೇ ಆಗ್ರಹಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಸ್ವತಃ ಸಿಎಂ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಗೋಕಾಕ್ ಸಾಹುಕಾರ್ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಈಗಾಗಲೇ ದಲಿತ ಸಿಎಂ ಕೂಗು ಜೋರಾಗಿದೆ. ಸಚಿವ ಡಾ. ಜಿ ಪರಮೇಶ್ವರ್, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನದ ಮೇಲೆ ಒಂದು ಕಣ್ಣು ಇಟ್ಟವರೇ. ಸಧ್ಯ ನಡೆಯುತ್ತಿರುವ ಬೆಳವಣಿಗೆ ಮಧ್ಯೆ ದಲಿತ ಸಿಎಂ ಕಾರ್ಡ್ ಪ್ಲೇ ಮಾಡುವ ಮುಲಕ ಮುಂದೆ ಏನಾದರು ಬದಲಾವಣೆ ಆದರೆ ಲಾಭ ಆಗುವ ಲಕ್ಷಣ ಇರುವುದಂತು ಸುಳ್ಳಲ್ಲ.
ಸಧ್ಯ ಸತೀಶ್ ಜಾರಕಿಹೊಳಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವಿನ ಭೇಟಿಗೆ ಸಾಕಷ್ಟು ಊಹಾಪೋಹ ಮೂಡಿಸಿದೆ. ಆದರೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಚಿವ ಮಹಾದೇವಪ್ಪ ಮನೆಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ಡಿನ್ನರ್ ಮೀಟಿಂಗ್ ಮಾಡಿ ಅನೇಕ ಚರ್ಚೆ ನಡೆಸಿದ್ದರು. ಈ ಮೀಟಿಂಗ್ ವರದಿಯನ್ನು ವರಿಷ್ಠರಿಗೆ ಒಪ್ಪಿಸಲು ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ ಎಂಬ ಮಾತು ಇದೆ.
ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಸಧ್ಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಮಧ್ಯೆ ಸಿಎಂ ಪರವಾಗಿ ಕಾಂಗ್ರೆಸ್ ವರಿಷ್ಠರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಸುರ್ಜೇವಾಲಾ ಅವರು ಸುದ್ದಿಘೋಷ್ಠಿ ಮೂಲಕ ಬೆಂಬಲ ನೀಡಿದ್ದಾರೆ. ಹೈಕಮಾಂಡ್ ಕೂಡಾ ನಾವು ಸಿಎಂ ಬೆಂಬಲಕ್ಕೆ ಇದ್ದೇವೆ ಎಂಬ ಮಾತು ಹೇಳಿದ್ದು ಮುಂದೆ ಯಾವೆಲ್ಲ ಬದಲಾವಣೆ ಆಗುತ್ತದೆ ಎಂದು ಕಾದು ನೋಡಬೇಕು.


