ಗ್ಯಾರಂಟಿ ಹಣ ಕರ್ಪೂರ, ಬಾಳೆಹಣ್ಣಿಗೆ ಬಳಸಬೇಡಿ – ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ವಿವಿಧ ಯೋಜನೆಗಳಿಂದ ಬಡ ಕುಟುಂಬಗಳಿಗೆ ಸರ್ಕಾರ ಗ್ಯಾರಂಟಿ ಹಣದ ಸಹಾಯ ಮಾಡುತ್ತಿದ್ದು ಇದನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಇದರ ಹೊರತಾಗಿ ಕರ್ಪೂರ, ಬಾಳೆಹಣ್ಣಿಗೆ ಬಳಕೆ ಮಾಡಬೇಡಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶನಿವಾರ ನಗರದ ಕುಮಾರಗಂಧರ್ವ ಭವನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಇವರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಸಧ್ಯ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದ ಪ್ರತಿ ಬಡ ಕುಟುಂಬಕ್ಕೆ ಆರ್ಥಿಕ ಸಹಕಾರಿ ಆಗಲಿದ್ದು, ಸರ್ಕಾರದ ಹಣವನ್ನು ಅನವಶ್ಯಕವಾಗಿ ಕರ್ಪೂರ, ಬಾಳೆಹಣ್ಣಿಗೆ ಖರ್ಚು ಮಾಡಬಾರದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇಷ್ಟೊಂದು ದೊಡ್ಡ ಮೊತ್ತವನ್ನು ಸರಕಾರ ಹೇಗೆ ಹೊಂದಾಣಿಕೆ ಮಾಡಲಿದೆ ಎಂಬ ಆತಂಕವಿತ್ತು. ಆದರೆ ಮುಖ್ಯಮಂತ್ರಿಗಳು ಇದನ್ನು ಸುಗಮವಾಗಿ ಜಾರಿಗೊಳಿಸುವ ಮೂಲಕ ನಮ್ಮ ಸರಕಾರ ಬಡವರ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಬದುಕು ರೂಪಿಸಲು ಮುಂದಾಗಬೇಕು. ಬಸವಣ್ಣನವರ ಸಮಾನತೆ; ಡಾ. ಅಂಬೇಡ್ಕರ್ ಅವರ ಸಂವಿಧಾನವನ್ನು ಗೌರವಿಸುವಂತಹ ಸಂಸ್ಕಾರ ಹಾಗೂ ಶಿಕ್ಷಣವನ್ನು ನೀಡಬೇಕು ಎಂದು ಕರೆ ನೀಡಿದರು.
ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪರ ಯೋಜನೆಗಳನ್ನು ಸರಕಾರ ಜಾರಿಗೊಳಿಸಲಿದೆ. ಸರಕಾರ ವಿನಿಯೋಗಿಸುವ ಇಷ್ಟು ದೊಡ್ಡ ಮೊತ್ತದ ಹಣ ಸದ್ಬಳಕೆಯಾಗಬೇಕು. ಸರಕಾರದ ದುಡ್ಡು ಸಾರ್ವಜನಿಕರ ದುಡ್ಡೇ ಆಗಿರುವುದರಿಂದ ಅದನ್ನು ಇತಿಮಿತಿಯಲ್ಲಿ ಬಳಸಬೇಕು ಎಂದು ಸಚಿವ ಜಾರಕಿಹೊಳಿ ಕಿವಿಮಾತು ಹೇಳಿದರು.


