ರಾಯಬಾಗದ ಕಾಮುಕ ಸ್ವಾಮಿಗೆ 35 ವರ್ಷ ಜೈಲು ; ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್..!
ಬೆಳಗಾವಿ : ಮಠಕ್ಕೆ ಬಂದ ಭಕ್ತೆಯನ್ನು ಸ್ವಾಮೀಜಿಯೋರ್ವ ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಪ್ರಕರಣ ಸಾಬೀತಾಗಿದ್ದು ಆರೋಪಿಗೆ 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರು. ದಂಡ ವಿಧಿಸಿ ಬೆಳಗಾವಿ ಪೋಕ್ಸೋ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮ ಮಂದಿರ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಮೇ.13 ರಂದು
ಮಠಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ನಂತರ ರಾಯಚೂರು, ಬಾಗಲಕೋಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿ ಕೊನೆಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದ.
ಈ ಕುರಿತು ಅಪ್ರಾಪ್ತ ಬಾಲಕಿ ಕುಟುಂಬದವರು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ತದನಂತರ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ಮೇ. 24 ರಂದು ಅತ್ಯಾಚಾರ ಆರೋಪಿ ಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.
ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಬೆಳಗಾವಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ ಒಟ್ಟು 8 ಸಾಕ್ಷಿ, 78 ದಾಖಲೆಗಳ ಆಧಾರದ ಮೇಲೆ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿದ್ದು ಶನಿವಾರ ಶಿಕ್ಷೆ ಪ್ರಕಟಿಸಿದೆ.
ಆರೋಪಿಗೆ ಒಟ್ಟು 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷ ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿದ್ದರು.ಅಭಿಯೋಜಕ ಎಲ್. ವಿ. ಪಾಟೀಲ್ ಸರಕಾರದ ಪರವಾಗಿ ವಾದ ಮಂಡಿಸಿದ್ದರು.
************
ಬಾಕ್ಸ್ :::::::
ಕಲಬುರಗಿ ಮೂಲದ ಸ್ವಾಮೀಜಿ
ಮೂಲತಃ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲೋಕೇಶ್ವರ ಶಾಬಣ್ಣ ಭಂಗಿ ಹೆಸರಿನ ಸ್ವಾಮೀಜಿ ಕಳೆದ ಎಂಟು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಎಂಟು ಎಕರೆ ಸರಕಾರಿ ಜಮೀನು ಅತಿಕ್ರಮಣ ಮಾಡಿಕೊಂಡು ಮಠ ನಿರ್ಮಿಸಿದ್ದ. ಕೆಲ ವರ್ಷಗಳ ಹಿಂದೆಯೇ ಸ್ವಾಮೀಜಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದರು ಯಾವುದೇ ಪ್ರಯೋಜನ ಆಗಿರಲಿಲ್ಲ. ಈತನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದಂತೆಯೇ ಕಳೆದ ಮೇ. ನಲ್ಲಿ ಮಠವನ್ನು ನೆಲಸಮ ಮಾಡಲಾಗಿತ್ತು. ಕೊನೆಗೂ ನ್ಯಾಯಾಲಯ ಆರೋಪಿಗೆ ತಕ್ಕ ಶಿಕ್ಷೆ ನೀಡಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
***********

