ಜಾರಕಿಹೊಳಿ ಕೋಟೆಗೆ ಕತ್ತಿ ಸಾಹುಕಾರ್ ಎಂಟ್ರಿ ; ಹೇಗಿತ್ತು ಕತ್ತಿ ಗತ್ತು..?
ಬೆಳಗಾವಿ : ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಯಾರು ಯಾವಾಗ ರೆಬೆಲ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಒಂದಾನೊಂದು ಕಾಲದಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬದ ನಡುವಿನ ಬಾಂಧವ್ಯದ ಉತ್ತುಂಗ ಈಗ ಕಡಿಮೆಯಾಗಿದೆ. ಸ್ನೇಹಿತರು ಈಗ ಎದುರಾಳಿಗಳಾಗಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ, ಹಿರಣ್ಯಕೇಶಿ ಕಾರ್ಖಾನೆ ಆಡಳಿತ ಚುಕ್ಕಾಣಿ ಹಾಗೂ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಸ್ಥೆ ಆಡಳಿತ ಕೇಂದ್ರ ಕತ್ತಿ ಕುಟುಂಬದ ಹಿಡಿತ ಕೈ ತಪ್ಪಿತ್ತು. ಇದರಿಂದ ಬಹಿರಂಗವಾಗಿಯೇ ರಮೇಶ್ ಕತ್ತಿ ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ಎಲ್ಲಾ ಬೆಳವಣಿಗೆ ನಂತರ ಈಗ ಮಾಜಿ ಸಂಸದ ರಮೇಶ್ ಕತ್ತಿ ಗೋಕಾಕ್ ನಗರಕ್ಕೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ ಇವರಿಗೆ ಸಾಕಷ್ಟು ಯುವಕರು ಸಾಥ್ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಮಹಾಂತೇಶ್ ಕಡಾಡಿ ಸೇರಿದಂತೆ ತಾಲೂಕಿನ ಅನೇಕ ಯುವಕರು ಕತ್ತಿ ಅವರಿಗೆ ಸ್ವಾಗತ ಕೋರಿದ್ದು ನಂತರ ರಮೇಶ್ ಕತ್ತಿ ಲಕ್ಷ್ಮೀ ದೇವಿ ದರ್ಶನ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಯಾವುದೇ ಭಾಗದಲ್ಲೂ ಜಾರಕಿಹೊಳಿ ಮನೆತನದ ಅಭಿಮಾನಿ ವರ್ಗ ಇದ್ದೇ ಇದೆ. ಈ ನಡುವೆ ಜಿಲ್ಲೆಯ ಇನ್ನೊಂದು ಜನಪ್ರಿಯ ಮನೆತನವಾದ ಕತ್ತಿ ಕುಟುಂಬ ಅಷ್ಟೇ ಪ್ರಭಲವಾಗಿದೆ. ಸಧ್ಯ ರಾಜಕೀಯ ಕಾರಣಕ್ಕೆ ಎರಡೂ ಕುಟುಂಬದ ನಡುವಿನ ರಾಜಕೀಯ ಯುದ್ಧ ಜೋರಾಗಿ ನಡೆಯುತ್ತಿದೆ.


