ಧಾರಾಕಾರ ಮಳೆಗೆ ಬೆಳಗಾವಿ ತತ್ತರ ; ಅಕಾಲಿಕ ಮಳೆಯಿಂದ ಸಂಕಷ್ಟದಲ್ಲಿ ಅನ್ನದಾತ..!

ಬೆಳಗಾವಿ : ನಗರದಲ್ಲಿ ಮಂಗಳವಾರ ಸುರಿದ ಆಲಿಕಲ್ಲು ಮಳೆ ಆರ್ಭಟಕ್ಕೆ ಜನಜೀವನದ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು.
ಗುಡುಗು, ಮಿಂಚು ಇಲದೇ ಏಕಾಏಕಿ ಮಳೆಯಿಂದ ನಗರ ನಿವಾಸಿಗಳಿಗೆ ಅಚ್ಚರಿ ತರಿಸಿದ್ದಲ್ಲದೆ. ರಣಬೀಕರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಬೆಳಗಾವಿ ರಸ್ತೆಗಳು ನದಿಗಳಾದವು.
ರಂಜಾನ್ ನಿಮಿತ್ಯವಾಗಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಇಪ್ಪತ್ತಕ್ಕೂ ಹೆಚ್ಚು ಗೂಡಂಗಡಿಗಳು ಬಿರುಗಾಳಿಗೆ ಧರೆಗುರುಳಿವೆ.
ಬಲವಾದ ಗಾಳಿಯ ಪರಿಣಾಮವಾಗಿ ಅಂಗಡಿಗಳ ಮೇಲ್ಛಾವಣಿಗಳು ಹಾರಿ ಹೋಗಿ, ಅಂಗಡಿಗಳಲ್ಲಿದ್ದ ಆಹಾರ ಸಾಮಾಗ್ರಿಗಳು ಸೇರಿದಂತೆ ವಿವಿಧ ವಸ್ತುಗಳಿಗೆ ಹಾನಿಯಾಗಿದೆ. ಸಂಜೆ ಸುಮಾರು 7 ಗಂಟೆ ವೇಳೆಗೆ ವ್ಯಾಪಾರಸ್ಥರು ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದಾಗಲೇ ಏಕಾಏಕಿ ಸುರಿದ ಮಳೆ ಮತ್ತು ಗಾಳಿಯಿಂದ ಜನ ತತ್ತರಿಸಿದರು.
ಬೆಳಗಾವಿ ನಗರದಲ್ಲಿ ಸುರಿದ ಧಾರಾಕರ ಆಲಿಕಲ್ಲು ಮಳೆಗೆ ಖಾಸಬಾಗ ಶೃಂಗೇರಿ ಕಾಲೋನಿಯಲ್ಲಿ ಸಂಪೂರ್ಣ ಜಲಾವೃತಗೊಂಡು ಸ್ಥಳೀಯರು ಮನೆ ಬಿಟ್ಟು ಹೊರಗಡೆ ಬರದ ಸ್ಥೀತಿ ನಿರ್ಮಾಣವಾಗಿತ್ತು.
ಮಂಗಳವಾರ ಮಧ್ಯಾಹ್ನದಿಂದ ಆರಂಭವಾಗಿದ್ದ ಆಲಿಕಲ್ಲು ಮಳೆ ಅಲ್ಲಲ್ಲಿ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶದ ಬಡಾವಣೆಯಲ್ಲಿ ನೀರು ನುಗ್ಗಿದ್ದು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಮಾಡಿದ ರಸ್ತೆ ಕಾಮಗಾರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.


