ಬೆಳಗಾವಿ : ರಾಜ್ಯ ಅಪೆಕ್ಸ್ ಬ್ಯಾಂಕ್ ನಿಂದ ಬಿಡಿಸಿಸಿಗೆ ಪ್ರತಿನಿಧಿ ನಿರ್ದೇಶಕರ ನೇಮಕ ಮಾಡಲಾಗಿದ್ದು, ಸಹಕಾರ ಸಚಿವ ಲಕ್ಷ್ಮಣ ಸವದಿ ತಮ್ಮ ಆಪ್ತನಿಗೆ ಅವಕಾಶ ಕಲ್ಪಿಸುವ ಮೂಲಕ ಕೈ ಮೇಲಾಗಿಸಿಕೊಂಡಿದ್ದಾರೆ.

ಬಿಡಿಸಿಸಿ ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕ್ ನಿಂದ ಪ್ರತಿನಿಧಿ ನಿರ್ದೇಶಕರಾಗಿ ಅಥಣಿಯ ಮುತ್ತಣ್ಣ ಕಾತ್ರಾಳ್ ಅವರನ್ನು ನೇಮಕ ಮಾಡಲಾಗಿದೆ. ಜೈನ ಸಮುದಾಯಕ್ಕೆ ‌ಸೇರಿರುವ ಮುತ್ತಣ್ಣ ಕಾತ್ರಾಳ್ ಅವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಕ‌ ಮಾಡುವ ಮೂಲಕ ಸಚಿವ ಲಕ್ಷ್ಮಣ ತಮ್ಮ ಆಪ್ತನಿಗೆ ಪಟ್ಟ ಕಟ್ಟುವ ಕೆಲಸ ಮಾಡಿದ್ದಾರೆ‌‌.

ಡಿಸಿಸಿ ಬ್ಯಾಂಕ್‌ನ ತೆರವಾದ ಸ್ಥಾನಕ್ಕೆ ಕುರುಬ ಸಮುದಾಯದ ಮುಖಂಡರೊಬ್ಬರನ್ನು ನೇಮಕ ಮಾಡಲು ಜಾರಕಿಹೊಳಿ ಸಹೋದರರು ಸಿದ್ಧತೆ ನಡೆಸಿದ್ದರು. ಈ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ತಮ್ಮ ಬಣದ ಪ್ರಭಾವ ಸಾಬೀತುಪಡಿಸಲು ಮುಂದಾಗಿದ್ದರು. ಆದರೆ ಸಹಕಾರ ಖಾತೆಯ ಚುಕ್ಕಾಣಿ ಹಿಡಿದಿರುವ ಸಚಿವ ಲಕ್ಷ್ಮಣ ಸವದಿ, ತಮ್ಮ ಇಲಾಖಾ ವ್ಯಾಪ್ತಿಯ ನಿರ್ದೇಶನದ ಬಲ ಬಳಸಿ ಜಾರಕಿಹೊಳಿ ಬಣದ ಲೆಕ್ಕಾಚಾರಕ್ಕೆ ಭರ್ಜರಿ ಬ್ರೇಕ್ ಹಾಕಿದ್ದಾರೆ.

ಕಳೆದ ಮೂರು ದಶಕಗಳಿಂದಲೂ ಲಕ್ಷ್ಮಣ ಸವದಿ ಅವರ ನಂಬಿಕಸ್ಥ ಹಾಗೂ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪರಮಾಪ್ತನಿಗೆ ಈ ಮಹತ್ವದ ಹುದ್ದೆ ಕೊಡಿಸುವ ಮೂಲಕ ಜಿಲ್ಲಾ ಸಹಕಾರ ರಾಜಕಾರಣದಲ್ಲಿ ತಮ್ಮ ಹಿಡಿತ ಮತ್ತು ಪ್ರಾಬಲ್ಯವನ್ನು ಸವದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಜಿಲ್ಲಾ ರಾಜಕಾರಣದಲ್ಲಿ ಸವದಿ ಕೈ‌ ಮೇಲುಗೈ….?

ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಅಧಿಕಾರ ಇದ್ದವರ ಕೈಗೆ ಇಡೀ ವ್ಯವಸ್ಥೆಯ ಆಟ ಬದಲಾಯಿಸುವ ಶಕ್ತಿ ಇರುತ್ತದೆ. ಸಧ್ಯ ಅಂತಹುದೇ ರಾಜಕೀಯ ಆಟ ಬೆಳಗಾವಿಯಲ್ಲಿ ನಡೆದಿದೆ.

ಕಳೆದ ಮೂರು ವರ್ಶಗಳಿಂದ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬಿಟ್ಟ ಬಾಣಗಳನ್ನು ಸಧ್ಯ ಸಹಕಾರ ಸಚಿವ ಲಕ್ಷ್ಮಣ ಸವದಿ ತಡೆದು ಮರಳಿ ತಿರು ಬಾಣಗಳನ್ನು ಬಿಡಲು ಪ್ರಾರಂಭಿಸಿದ್ದಾರೆ. ಇದರ ಫಲವಾಗಿ ಸಧ್ಯ ಗೋಕಾಕ್ ಸಾಹುಕಾರ್ ಮಾಡಿದ್ದ ಕೆಲ ಬದಲಾವಣೆಗಳನ್ನು ಈಗ ಸವದಿ ಮರುಸ್ಥಾಪನೆ ಮಾಡಲು ಮುಂದಾಗುತ್ತಿದ್ದಾರೆ.

ಹೌದು ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವಿನ ರಾಜಕೀಯ ವೈರತ್ವ ಇಂದು ನಿನ್ನೆಯದಲ್ಲ.‌ ದಶಕಗಳಿಂದಲೂ ಎರಡೂ ಮನೆತನಗಳ ನಡುವೆ ಕೆಲವು ಭಿನ್ನಾಭಿಪ್ರಾಯ ಇವೆ. ಈ ಮಧ್ಯೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿಗೆ ಸಧ್ಯ ಡಿಕೆಸಿ ಸಂಪುಟದಲ್ಲಿ ಸಚಿವಸ್ಥಾನ ಸಿಕ್ಕಿದ್ದು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಲವು ಮಹತ್ವದ ಬದಲಾವಣೆಗೆ ಸಹಕಾರಿಯಾಗಿದೆ.

ಸತೀಶ್ ಜಾರಕಿಹೊಳಿಗೆ ಸವದಿ ಟಕ್ಕರ್ : ಕಳೆದ ಎರಡು ದಶಕಗಳ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಕತ್ತಿ ಹಿಡಿತದಿಂದ ಜಾರಕಿಹೊಳಿ ಹಿಡಿತಕ್ಕೆ ಬದಲಾಯಿತು. ಈ ವೇಳೆ ಸಚಿವ ಲಕ್ಷ್ಮಣ ಸವದಿ ಅಳಿಯ ಶಂಕರ ನಂದೇಶ್ವರ ಅವರನ್ನು ಅಥಣಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸ್ಥಾನದಿಂದ ವರ್ಗಾವಣೆ ಮಾಡುವ ಮೂಲಕ ಸವದಿಗೆ ಜಾರಕಿಹೊಳಿ ಸಹೋದರರು ಟಕ್ಕರ್ ಕೊಟ್ಟಿದ್ದರು. ಆದರೆ ಸಧ್ಯ ಸಹಕಾರಿ ಸಚಿವರಾದ ಲಕ್ಷ್ಮಣ ಸವದಿ ಮತ್ತೆ ಅಳಿಯನನ್ನು ಈ ಹಿಂದಿನ ಜಾಗಕ್ಕೆ ಮರಳಿ ತಂದಿದ್ದಾರೆ.

ಅಥಣಿಯಲ್ಲಿ ಲಕ್ಷ್ಮಣ ಸವದಿ ಪ್ರಭಾವ ಕುಗ್ಗಿಸುವ ಉದ್ದೇಶದಿಂದ ಇವರ ಅಳಿಯನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಈಗ ಇದೇ ಲಕ್ಷ್ಮಣ ಸವದಿ ಮತ್ತೆ ತಮ್ಮ ಅಳಿಯನನ್ನು ಹಳೇ ಜಾಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು‌ ಕೌಂಟರ್ :

ಕೇವಲ ಅಳಿಯನನ್ನು ವರ್ಗಾವಣೆಗೊಂಡ ಜಾಗದಲ್ಲಿ ಮರಳಿ ತರುವುದು ಮಾತ್ರವಲ್ಲದೆ ಈ ಹಿಂದೆ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರು ನೇಮಕ ಮಾಡಿದ್ದ ಆದೇಶಕ್ಕೂ ಸಧ್ಯ ತಡೆ ಕೊಡಲಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿದ್ದ ಮೂವರ ಆಯ್ಕೆಯನ್ನು ರದ್ದುಗೊಳಿಸಲಾಗಿದೆ.

ಬಿಡಿಸಿಸಿ ಬ್ಯಾಂಕ್ ಗೆ ಸರಕಾರದಿಂದ ನಾಮನಿರ್ದೇಶನ ಗೊಂಡಿದ್ದ ಸುನೀತಾ ಐಹೊಳೆ, ಸುರೇಶ್ ಇಟಗಿ, ಬಾಳೇಶ ದಾಸನಟ್ಟಿ ಈ ಮೂವರು ನಿರ್ದೇಶಕರ ನಾಮನಿರ್ದೇಶ ರದ್ದುಗೊಂಡಿದೆ. ಸಪ್ಟೆಂಬರ್ ನಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿತ್ತು.‌ ಆದರೆ ಹೈ ಕೋರ್ಟ್ ಈ ತಿದ್ದುಪಡಿಗೆ ತಡೆಯಾಜ್ಞೆ ನೀಡಿದೆ.