ಸದ್ದಿಲ್ಲದೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದ ಅಥಣಿ ಸಾಹುಕಾರ ; ಜನರ ಬದುಕು ಹಸಿರಾಗಿಸುವ ಸಂಕಲ್ಪ
ಅಥಣಿ : ಗ್ಯಾರಂಟಿ ಯೋಜನೆಗಳ ಕಿತ್ತಾಟದ ಮಧ್ಯೆ ಅಥಣಿ ಶಾಸಕ ಲಕ್ಷ್ಮಣ ಸವದಿ ಸದ್ದಿಲ್ಲದೆ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದು, ಕೋಟ್ಯಾಂತರ ರು. ಅನುದಾನದ ನೀರಾವರಿ ಯೋಜನೆ ನಡೆಯುತ್ತಿದೆ.
ಸೋಮವಾರ ತಾಲೂಕಿನ ಝಂಜರವಾಡ ಗ್ರಾಮದಲ್ಲಿ ಕೊಟ್ಟಲಗಿ – ಅಮ್ಮಾಜೇಶ್ವರಿ ಏತ ನೀರಾವರಿ -ಯೋಜನೆಯ ಜಾಕ್ವೆಲ್ ಕಮ್ ಪಂಪ್ಹೌಸ್ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಲಕ್ಷ್ಮಣ ಸವದಿ ನೆರವೇರಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಮತ್ತು ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚಿನ ಅನುದಾನವನ್ನ ನೀಡಿದ್ದಾರೆ.
ಮೊದಲ ಹಂತವಾಗಿ ಬಂದಿರುವ ಅನುದಾನದಿಂದ ಈಗ ಕಾಮಗಾರಿ ಪ್ರಗತಿ ಹಂತದಲ್ಲಿವೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಸುಮಾರು 75 ಸಾವಿರ ಎಕರೆ ಪ್ರದೇಶ ನೀರಾವರಿ ಸೌಲಭ್ಯ ಹೊಂದುವ ಮೂಲಕ ರೈತರ ಜಮೀನುಗಳು ಹಸಿರಾಗಲಿದೆ ಎಂದರು.
ರೈತರ ಜಮೀನುಗಳಲ್ಲಿ ಪ್ರತಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದರಂತೆ ಬೋರ್ವೆಲ್ ಕೋರಿಸುವ ಪೈಲೆಟ್ ನೀರಾವರಿ ಯೋಜನೆಯನ್ನು ಕೇಂದ್ರ ಸರ್ಕಾರದ ಶೇ. 60 ಮತ್ತು ರಾಜ್ಯ ಸರ್ಕಾರದ ಶೇ 40 ರಷ್ಟು ಅನುದಾನದಲ್ಲಿ ತಾಲೂಕಿನ 2.25 ಲಕ್ಷ ಎಕರೆ ಪ್ರದೇಶದಲ್ಲಿ ಬೋರ್ವೆಲ್ ಕೊರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.


