ಪ್ರೀತಿ ಹಿಂದೆ ಬಿದ್ದ ತಮ್ಮನನ್ನು ಕಲ್ಲಿಂದ ಜಜ್ಜಿ ಕೊಂದ ಅಣ್ಣ ; ತಂದೆಯೂ ಸಾಥ್
ಚನ್ನಮ್ಮನ ಕಿತ್ತೂರು : ಪ್ರೀತಿಸಿದವಳನ್ನೇ ಮದುವೆಯಾಗುವೆ ಎಂದು ಹಠ ಹಿಡಿದು ಕುಡಿತದ ಚಟಕ್ಕೆ ಬಿದ್ದು, ಮನೆಗೆ ಬಂದು ಕಿರಿಕ್ ಮಾಡುತ್ತಿದ್ದ ಎಂಬ ಕೋಪಕ್ಕೆ ತಮ್ಮನನ್ನು ಸ್ವತ: ಅಣ್ಣನೇ ಕೊಲೆ ಮಾಡಿರುವ ಘಟನೆಯೊಂದು ತಾಲ್ಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಇದಕ್ಕೆ ಹಿರಿಯಮಗನಿಗೆ ಅಪ್ಪನೂ ಸಾಥ್ ಕೊಟ್ಟ ಆರೋಪ ಕೇಳಿಬಂದಿದೆ.
ಚಿಕ್ಕನಂದಿಹಳ್ಳಿ ಗ್ರಾಮದ ಮಂಜುನಾಥ ನಾಗಪ್ಪ ಉಳ್ಳಾಗಡ್ಡಿ (25) ಕೊಲೆಯಾದ ದುರ್ದೈವಿ. ಇತನ ತಂದೆ ನಾಗಪ್ಪ ಉಳ್ಳಾಗಡ್ಡಿ ಹಾಗೂ ಹಿರಿಯ ಮಗ ಗುರುಬಸಪ್ಪ ಉಳ್ಳಾಗಡ್ಡಿ ಸೇರಿಕೊಂಡು ಮೃತ ಮಂಜುನಾಥನ ತಲೆಗೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುಬಸಪ್ಪ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ದಿನದ ಹಿಂದೆ ರಜೆಯ ಮೇಲೆ ಸ್ವಗ್ರಾಮಕ್ಕೆ ಮನೆಗೆ ಬಂದಿದ್ದ. ಆತನ ತಮ್ಮ ಮೃತ ಮಂಜುನಾಥ್ ಬೇರೆಜಾತಿ ಯುವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಕಿರಿಕ್ ಶುರುವಾಗಿ ಹಿರಿಯ ಮಗನ ಮದುವೆ ಫಿಕ್ಸ್ ಮಾಡಿದ್ದೀರಿ, ನನ್ನ ಮದುವೆ ಯಾವಾಗ? ಎಂದು ಮಂಜುನಾಥ ನಶೆಯಲ್ಲಿ ಮನೆಯವರೊಂದಿಗೆ ಜಗಳವಾಡಿದ್ದ.
ಜಗಳ ವಿಕೋಪಕ್ಕೆ ತಿರುಗಿ ಮದುವೆ ಆಗಬೇಕಾದ ಯುವಕ ತಂದೆ ಮತ್ತು ಅಣ್ಣನ ಕೈಯಿಂದ ಕೊಲೆಯಾಗಿ ಮಸಣ ಸೇರಿದ್ದಾನೆ. ಸದ್ಯ ಸ್ಥಳಕ್ಕೆ ಬಂದ ಬೈಲಹೊಂಗಲ ಡಿವೈಎಸ್ ಪಿ ರವಿ ನಾಯಕ, ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಗಂಗೊಳ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


