ಬೈಲಹೊಂಗಲ : ಕೇದಾರನಾಥ ವೇದಪತಿ ಮೃತ್ಯುಂಜಯ ಹಿರೇಮಠ ನಿಧನ
ಬೆಳಗಾವಿ : ಉತ್ತರಾಖಂಡದ ಭದ್ರಿನಾಥ ದೇವಸ್ಥಾನದಲ್ಲಿ ವೇದಪತಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಂಡಿತ ಮೃತ್ಯುಂಜಯ್ಯ ಹಿರೇಮಠ ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.
ಮೂಲತಃ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಪಂಡಿತ ಮೃತ್ಯುಂಜಯ್ಯ ಹಿರೇಮಠ (34 ) ಕಳೆದ ಐದು ದಶಕಗಳಿಂದ ಕೇದಾರನಾಥಲ್ಲಿ ವಾಸವಾಗಿತ್ತು.
ಮೃತರ ತಂದೆ ಗುರುಲಿಂಗ ಹಿರೇಮಠ ಅವರು ಕೇದಾರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಮೃತರಿಗೆ ಒಟ್ಟು ಮೂರು ಜನ ಸಹೋದರರಿದ್ದು, ಮೃತ್ಯುಂಜಯ್ಯ ಮೂರನೇಯವರಾಗಿದ್ದಾರೆ. ಹಿರಿಯ ಸಹೋದರ ಶಂಕರಲಿಂಗ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ಸಹೋದರ ಡಾ. ಶಿವಕಾಂತೇಶ ಕೇದಾರದಲ್ಲಿಯೇ ಸರ್ಕಾರಿ ವೈದ್ಯರಾಗಿ, ಕೊನೆಯ ಸಹೋದರ ಉಮೇಶ್ವರ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಮೃತ್ಯಂಜಯ್ಯ ಹಿರೇಮಠ ಅವರು ಎಸ್‌ಎಸ್‌ಎಲ್‌ಸಿ ವರೆಗೆ ಕೇದಾರದಲ್ಲಿ ವ್ಯಾಸಂಗ ಮಾಡಿದ್ದು ನಂತರ ಕಲಬುರಗಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದಾರೆ. ವೇದಾಧ್ಯಯನ ಹೆಚ್ಚು ಪ್ರಾವಿಣ್ಯತೆ ಪಡೆದು ಧರ್ಮ ಭೋದನೆ ಮಾಡುತ್ತಿದ್ದರು.
ಸಂಗೀತದಲ್ಲಿ ಪ್ರಾವೀಣ್ಯತೆ ಹೊಂದಿದ್ದ ಇವರು ಕೇದಾರನಾಥ ದೇವಾಲಯದಲ್ಲಿ ಹಾಡಿದ್ದ ಶಿವಸ್ತುತಿ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದವು.
ಮೃತರ ಅಂತ್ಯಕ್ರಿಯೆಯನ್ನು ಕೇದಾರದ ಓಕಿಮಠದಲ್ಲಿ ಮಾಡಲಾಗಿದೆ. ಇವರ ಮನೆ ಹಾಗೂ ಜಮೀನು ಚಿಕ್ಕಬಾಗೇವಾಡಿ ಗ್ರಾಮದಲ್ಲಿಯೇ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರಿಗೆ ತಂದೆ ಗುರುಲಿಂಗ ಪೂಜಾರಿಜೀ ಹಿರೇಮಠ, ತಾಯಿ ಸುಮಿತ್ರಾದೇವಿ, ಮೂವರು ಸಹೋದರರು ಇದ್ದಾರೆ.


