ಭೀಕರ ರಸ್ತೆ ಅಪಘಾತ ; ಕಾಗವಾಡದ ಮೂವರು ಸಾವು
ಕಾಗವಾಡ : ದಾವಣಗೆರೆ ತಾಲೂಕಿನ ಅತ್ತಿಗೆರೆ – ರಾಮಗೊಂಡನಹಳ್ಳಿ ಮಧ್ಯೆ ಶನಿವಾರ ಬೆಳಗಿನ ಜಾವ ಖಾಸಗಿ ಬಸ್ ಮತ್ತು ಮಾರುತಿ ಇಕೋ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ.
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದವರಾದ ಹಣ್ಣಿನ ವ್ಯಾಪಾರಿ ವಿಜಯ ಭಜಂತ್ರಿ (30), ತರಕಾರಿ ವ್ಯಾಪಾರಿ ಬಸವರಾಜ ಐಬತ್ತಿ (30) ಮತ್ತು ಶ್ರೀಧರ ವಡ್ಡರ (27) ಮೃತಪಟ್ಟವರು.
ಅದೇ ಗ್ರಾಮದ ವಿಶ್ವನಾಥ ಈರಗೌಡ ಚೌಗಲೆ ಮತ್ತು ರಾಜು ಕಟ್ಟಿಕಾರ್ ಗಾಯಗೊಂಡಿದ್ದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಬಸ್‌ನಲ್ಲಿದ್ದ 11 ಜನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಮಾರುತಿ ಇಕೋ ವಾಹನದಲ್ಲಿ 5 ಜನರು ಊಟಿ ಇಂದ ಬೆಳಗಾವಿ ಕಡೆಗೆ ಬರುತ್ತಿದ್ದರು. ಖಾಸಗಿ ಬಸ್ ಮುಂಬೈನಿಂದ ಮೈಸೂರು ಕಡೆಗೆ ತೆರಳುತ್ತಿತ್ತು. ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


