ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ಗೆ ರಾಷ್ಟ್ರೀಯ ಪ್ರಶಸ್ತಿ ಗರಿ
ಬೆಳಗಾವಿ : ಸಮಾಜಿಕ ಕಾರ್ಯಗಳ ಮೂಲಕ ಬಡವರ ಪಾಲಿಗೆ ಆಸರೆಯಾದ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನ ಕಾರ್ಯಕ್ಕೆ
ರಾಷ್ಟ್ರೀಮಟ್ಟದ ಜೀವನ ಜ್ಯೋತಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಕನಸು ಡಿಜಿಟಲ್ ಸಲ್ಯೂಶನ್ಸ್ ಮತ್ತು ಎನ್.ಎಚ್.ಎಲ್ ವರ್ಲ್ಡ ಯುನಿಕ್ ಇವೆಂಟ್ಸ್ ನ್ಯೂಸ್ ಮತ್ತು ಅರ್ಗನೈಜೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ನಯನ ಸಭಾ ಭವನದಲ್ಲಿ ಮಾ. 3 ರಂದು ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಪ್ರಶಸ್ತಿ ಪಡೆದುಕೊಂಡರು.
ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ಮುಖಾಂತರ ಸುಮಾರು ಒಂದು ವರ್ಷಗಳಿಂದ ಬಡವರಿಗೆ ಸದಾಕಾಲ ಅನ್ನದಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜುಗೂಳ ಗ್ರಾಮದ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗೆ ಬೇಕಾಗುವಂತಹ ಶಾಲಾ ಸಾಮಗ್ರಿಗಳನ್ನು ನೀಡಿದ್ದಾರೆ.
ಜೊತೆಗೆ ಬೆಳಗಾವಿ ನಗರ ಸಮೀಪದ ಅನಾಥಾಶ್ರಮಗಳಿಗೆ ಅನ್ನದಾನವನ್ನು ಮಾಡುತ್ತಿದ್ದಾರೆ. ಹಾಗೂ ಗೋಶಾಲೆಗಳಿಗೆ ಅವಶ್ಯಕ ಸಾಮಗ್ರಿಗಳನ್ನು ನೀಡಿದ್ದಾರೆ. ಎಷ್ಟೋ ರೋಗಿಗಳಿಗೆ ಕಣ್ಣಿನ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿದ್ದಾರೆ. ಅವರ ಈ ಕಾರ್ಯಕ್ಕೆ ಅನೇಕ ಸಂಘ-ಸಂಸ್ಥೆಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅತ್ಯುತ್ತಮ ಸೋಶಿಯಲ್ ವರ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.
ಬಡವರಿಗಾಗಿ ಸದಾಕಾಲ ಅನ್ನದಾನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಮತ್ತು ನಮ್ಮ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ನಿರ್ಮಾಣ ಮಾಡಬೇಕು. ನಿರ್ಗತಿಕರಿಗಾಗಿ ವೃದ್ಧಾಶ್ರಮ ನಿರ್ಮಿಸಿ, ಜನರ ಸೇವೆ ಮಾಡುವ ಆಶಯ ಹೊಂದಿದ್ದೇವೆ ಎಂದು ಫೌಂಡೇಶನ್‌ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಅಭಿಪ್ರಾಯ ಹಂಚಿಕೊಂಡರು.


