ಗದಗ : ಅಕ್ಟೋಬರ್ 10ರೊಳಗೆ ಗದಗ (Gadag) ತಾಲೂಕನ್ನು ಬರ ಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಹೆಚ್‌.ಕೆ ಪಾಟೀಲ (H.K. Patil) ಎಚ್ಚರಿಸಿದ್ದಾರೆ.

ಗದಗ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕಾರವಾರ-ಕೈಗಾ ಹಾಗೂ ಗದಗದಿಂದ ಇಳಕಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ತಡೆದು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಹೆಚ್.ಕೆ. ಪಾಟೀಲ್ ಮಾತನಾಡಿ, ಸಿಎಂ ಭೇಟಿ ನೀಡಿದ್ರೂ ಬರ ಘೋಷಿಸಿಲ್ಲ ಯಾಕೆ? ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನೇತೃತ್ವದಲ್ಲಿ ನಾವು ಅಧಿಕಾರಿಗಳ ಸಭೆ ನಡೆಸಿದ್ದೆವು. ಜಿಲ್ಲೆಯಲ್ಲಿ ತೀವ್ರ ಬರ ಬಿದ್ದಿರುವ ಸ್ಪಷ್ಟ ಚಿತ್ರಣ ನಮಗಿತ್ತು.

ಅಧಿಕಾರಿಗಳ ವರದಿ ಬಳಿಕ ಖುದ್ದಾಗಿ ಮುಖ್ಯಮಂತ್ರಿಗಳೇ ಇಲ್ಲಿಗೆ ಭೇಟಿ ನೀಡಿ ಕದಾಂಪೂರದಿಂದ ಕುರ್ತಕೋಟಿವರೆಗೆ ಬೆಳೆ ವೀಕ್ಷಣೆ ಮಾಡಿದ್ದರು. ಇಷ್ಟೆಲ್ಲಾ ಆದರೂ ಗದಗ ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡದೇ ಬಿಟ್ಟಿದ್ದು ಯಾಕೆ? ಇದಕ್ಕೆ ಅಡ್ಡಿ ಪಡಿಸುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.

ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಭೀಕರ ಮಳೆ ಕೊರತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಮತ್ತು ಮೋಸವನ್ನು ಸಹಿಸಲು ಸಾಧ್ಯವಿಲ್ಲ. ನಾನು ರೈತ ಕುಟುಂಬದಿಂದ ಬಂದವನು, ರೈತರ ಪರ ಇರುವವನು. ಅವರ ಕಷ್ಟ ನನಗೆ ಚೆನ್ನಾಗಿ ಗೊತ್ತು ಎಂದು ಹೇಳಿದರು.