ಡಿಕೆಶಿಗೆ ಗೋಕಾಕ್ ಸಾಹುಕಾರ್ ಚೆಕ್ ಮೇಟ್ ; ಕಂಗಾಲಾದ ವಿರೋಧಿ ಬಣ..!
ಬೆಳಗಾವಿ : ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಒಬ್ಬರ ಪಾತ್ರವಿಲ್ಲ. ಅನೇಕರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಸರಕಾರ ರಚಣೆಯಾಗಿದ್ದು ಈ ಎಲ್ಲಾ ಶ್ರೇಯವನ್ನು ಒಬ್ಬರಿಗೆ ನೀಡುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು.
ಭಾನುವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಕೆಲವೇ ನಾಯಕರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ನಾನು ಒಪ್ಪಲ್ಲ. ಕಾಂಗ್ರೆಸ್ ಪಕ್ಷಕ್ಕೆ 1 ವರೆ ಕೋಟಿ ಮತದಾರರು ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಎಲ್ಲವೂ ನನ್ನಿಂದಲೇ ಆಗಿದೆ ಎಂದು ಹೇಳುವುದು ತಪ್ಪು ಎಂದು ಹೇಳುವ ಮೂಲಕ ಡಿ.ಕೆ ಶಿವಕುಮಾರ್ ಗೆ ಟಾಂಗ್ ನೀಡಿದರು.
ಮೊದಲಬಾರಿಗೆ ಆಯ್ಕೆಯಾದ ಶಾಸಕರಿಂದ ಹಿಡಿದು ಸಚಿವರು, ಹಿರಿಯ ಶಾಸಕರ ಪ್ರಯತ್ನದ ಫಲವಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅನೇಕರು ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಸಮಾನ ಪ್ರಾಮುಖ್ಯತೆ ಸಿಗಬೇಕು. ಕೇವಲ ಒಬ್ಬರಿಗೆ ಮಾತ್ರ ಶ್ರೇಯ ನೀಡುವುದು ಸರಿಯಲ್ಲ. ಎಲ್ಲರೂ ಸಮಾನವಾಗಿ ಲಾಭ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದರು.
ಸಿಎಂ ಬದಲಾವಣೆ ಕುರಿತು ಎದ್ದಿರುವ ಗೊಂದಲದ ಕುರಿತು ಪ್ರತಿಕ್ರಿಯೆ ನೀಡಿದ ಇವರು. ಅಧಿಕಾರ ಹಸ್ತಾಂತರ ಕುರಿತು ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ವಿಚಾರ. ಈ ಕುರಿತು ಹೈಕಮಾಂಡ್ ನಾಯಕರು ಕರೆದು ಮಾತುಕತೆ ನಡೆಸಿದರೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಸಧ್ಯ ಉಂಟಾಗಿರುವ ಗೊಂದಲದ ಕುರಿತು ಎಐಸಿಸಿ ಅಧ್ಯಕ್ಷರು ಸಭೆ ನಡೆಸಿ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಶಾಸಕರನ್ನು ಭೇಟಿಯಾದ ವಿಚಾರವಾಗಿ ಮಾತನಾಡಿ, ಅವರು ನಮ್ಮ ಶಾಸಕರು. ಹಾಗಾಗಿ, ಹೋಗಿ ಭೇಟಿಯಾಗಿ ಬಂದಿದ್ದಾರೆ. ಹಿಂದೆಯೂ ಒಂದು ಸಾರಿ ಹೋಗಿ ಭೇಟಿಯಾಗಿದ್ದರು. ಇದರಲ್ಲಿ ಅಂಡರ್ ಕರೆಂಟ್ ಶಾಕ್ ಏನಿಲ್ಲ. ಎಲ್ಲವೂ ಸರಿ ಇದೆ. ನಮ್ಮದೂ ಕರೆಂಟ್ ಏನಿಲ್ಲ, ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ. ಅದನ್ನು ಅವರೇ ನೋಡಿಕೊಳ್ಳುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಾಗ ಮಾಡುವ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷಕ್ಕೆ ಒಂದು ಲಿಮಿಟ್ ಇದ್ದೇ ಇರುತ್ತದೆ. ಯಾವುದೇ ಹುದ್ದೆ ಇದ್ದರೂ ಬದಲಾವಣೆ ಮಾಡುವ ಒಂದು ಕಾಲ ಬಂದೇ ಬರುತ್ತದೆ. ಇವತ್ತು ಬರಬಹುದು, ಒಂದು ವರ್ಷ ಬಿಟ್ಟು ಬರಬಹುದು. ಯಾವುದೇ ಸಂದರ್ಭದಲ್ಲಿ ಬರಬಹುದು ಎಂದು ಹೇಳಿದರು.
**********
ಪರಮೇಶ್ವರ್ ಹೇಳಿಕೆಗೆ ಸಾಹುಕಾರ್ ಬೆಂಬಲ..!
ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ. ಕಾಂಗ್ರೆಸ್ ಪಕ್ಷಕ್ಕೆ ದಲಿತ, ಹಿಂದುಳಿದ ಸಮುದಾಯದ ಪ್ರಮುಖ ಮತದಾರರು. ಹಾಗಾಗಿ ಆ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕಾಗಿದೆ. ಈ ಹಿಂದೆಯೂ ಪರಮೇಶ್ವರ ಅವರು ಸಿಎಂ ಆಕಾಂಕ್ಷಿ ಎಂದು ಹೇಳಿದ್ದು ತಪ್ಪೇನಿಲ್ಲ ಎಂದು ಹೇಳಿದರು.
*********


