ಸಿ.ಟಿ ರವಿಗೆ ಪರಿಷತ್ ಸ್ಥಾನ ; ಯತ್ನಾಳ್ ಗೆ ಲಾಟರಿ…?
ಬೆಂಗಳೂರು : ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಮೂವರಿಗೆ ಟಿಕೆಟ್ ಹಂಚಿಕೆ ಮಾಡಿದ್ದು, ಮಾಜಿ ಸಚಿವ ಸಿ.ಟಿ ರವಿ ಅವರಿಗೆ ನೀಡಿರುವ ಅವಕಾಶದ ಹಿಂದೆ ವರಿಷ್ಠರು ಅಳೆದು ತೂಗಿ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬರುವ ಜೂನ್ 13 ರಂದು ವಿಧಾನಸಭೆಯಿಂದ ಪರಿಷತ್ತಿಗೆ ನಡೆಯಲಿರು ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ ಬಿಜೆಪಿಯಿಂದ ಮೂವರಿಗೆ ಆಯ್ಕೆ ಮಾಡುವ ಅವಕಾಶ ಇದೆ. ಈ ಸ್ಥಾನಕ್ಕೆ ಮಾಜಿ ಸಚಿವ ಸಿ.ಟಿ ರವಿ, ಹಾಲಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಎಂ,ಜಿ ಮುಳೆ ಅವರಿಗೆ ಅವಕಾಶ ನೀಡಲಾಗಿದೆ.
ಹಾಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ ಪ್ರಸ್ತುತ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರೆ ತೆರವಾದ ಸ್ಥಾನಕ್ಕೆ ಸಿ.ಟಿ ರವಿ ಅವರನ್ನು ನೇಮಕ ಮಾಡುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ಹೊಂದಿದೆ.
ಪ್ರಸ್ತುತ ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗ ಸಮುದಾಯದ ಆರ್ ಅಶೋಕ್ ಅವರಿಗೆ ನೀಡಲಾಗಿದೆ. ಇನ್ನೂ ಇದೇ ಸಮುದಾಯದ ನಾಯಕನಿಗೆ ಪರಿಷತ್ತಿನಲ್ಲಿ ಸ್ಥಾನ ನೀಡುತ್ತಿರುವುದರ ಹಿಂದೆ ಬಿಜೆಪಿ ವರಿಷ್ಠರ ಲೆಕ್ಕಾಚಾರ ಅಡಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಆರ್. ಅಶೋಕ್ ಅವರ ಸ್ಥಾನಕ್ಕೆ ಹಾಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದರು ಅಚ್ಚರಿ ಇಲ್ಲ. ಇತ್ತ ಪಕ್ಷ ಸಂಘಟನೆಯ ಮೂಲಕ ಬಿಜೆಪಿ ಹೈಕಮಾಂಡ್ ಮತ್ತಷ್ಟು ಕಾರ್ಯಕರ್ತರಲ್ಲಿ ಹುರುಪು ತುಂಬುವ ಲಕ್ಷಣ ಇದೆ ಎಂಬುದು ವಾಸ್ತವ.


