ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದ ಪಾಪಿ ಪತ್ನಿ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪ್ರಿಯಕರನೊಂದಿಗೆ ಸೇರಿ ತಲೆಗೆ ಕಲ್ಲು ಎತ್ತು ಹಾಕಿ ಪತಿಯನ್ನೇ ಬರ್ಬರವಾಗಿ ಕೊಲೆಗೈದ ಆರೋಪಿಗಳನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಂದಿನಿಬಾಯಿ ಮತ್ತು ನಿತೀಶ್ ಕುಮಾರ್ ಬಂಧಿತ ಆರೋಪಿಗಳು. ವೆಂಕಟ್ ನಾಯಕ್(30) ಕೊಲೆಯಾದ ವ್ಯಕ್ತಿ.
09ರಂದು ಹೆಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಆರೋಪಿ ನಂದಿನಿಬಾಯಿ ತನ್ನ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ತನ್ನ ಪತಿ ವೆಂಕಟ್ ನಾಯಕ್ ತಲೆ ಮೇಲೆ ರುಬ್ಬುವ ಗುಂಡು ಹಾಕಿ ಕೊಲೆಗೈದಿದ್ದರು.
ಗಂಡ ಮನೆಯಲ್ಲಿ ಇಲ್ಲ ಎಂದು ಹೇಳಿ ನಂದಿನಿ ಬಾಯಿ ಜನವರಿ 09 ರಂದು ಪ್ರಿಯಕರ ನಿತೇಶ್ನನ್ನು ಹೆಚ್ಎಸ್ಆರ್ ಲೇಔಟ್ನ ತನ್ನ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಗಂಡ ವೆಂಕಟನಾಯಕ್ ಧಿಡೀರ್ ಮನೆಗೆ ಬಂದಿದ್ದ. ಮನೆಗೆ ಕಾಲಿಡುತ್ತಿದ್ದಂತೆ ರೂಮ್ನಲ್ಲಿ ತನ್ನ ಪತ್ನಿ ಬೇರೊಬ್ಬನ ಜೊತೆ ಆತ್ಮೀಯ ಸಲುಗೆಯಲ್ಲಿದ್ದದನ್ನು ಕಂಡು ಕೋಪಗೊಂಡಿದ್ದ. ಬಳಿಕ ಪತಿ-ಪತ್ನಿ ನಡುವೆ ಗಲಾಟೆಯಾಗಿದ್ದು ಜಗಳ ತೀವ್ರಗೊಳ್ಳುತ್ತಿದ್ದಂತೆ ತಲೆಗೆ ಕಲ್ಲು ಎತ್ತು ಹಾಕಿ ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಪತಿಯನ್ನು ಕೊಂದ ಬಳಿಕ ಮೃತದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾರೆ. ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿದ್ದಾರೆ. ನಂತರ ಬೆಳಗ್ಗೆ ಗಂಡ ಸಾವನ್ನಪ್ಪಿದ್ದಾನೆ ಎಂದು ನಂದಿನಿ ಪೊಲೀಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


