ವಿಶಿಷ್ಟ ರೀತಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜನ್ಮದಿನ ಆಚರಣೆ ; ಏನು ವಿಶೇಷ…?

ಬೆಳಗಾವಿ : ಸಮಾಜದ ಹಿರಿಯ ನಾಗರಿಕರನ್ನು ಗೌರವಿಸುವ ಉದ್ದೇಶದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಹುಟ್ಟು ಹಬ್ಬವನ್ನು ಹಿರಿಯ ನಾಗರಿಕರನ್ನು ಗೌರವಿಸುವ ಮೂಲಕ ಆಚರಿಸಿಕೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಹೊಟೆಲ್ ಎದುರಿನ ಮೈದಾನದಲ್ಲಿ ಫೆ.14 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಕ್ಷೇತ್ರದ 15 ಸಾವಿರಕ್ಕಿಂತ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಿರಿಯ ನಾಗರಿಕರು ಈ ಸಮಾಜದ ಆಸ್ತಿ,ಅವರ ಮುಖದಲ್ಲಿನ ನಗುವೇ ನನಗೆ ಶಕ್ತಿ ಎನ್ನುವ ಮಾತನ್ನು ಲಕ್ಷ್ಮೀ ಹೆಬ್ಬಾಳಕರ್ ಅವರು ಪದೇ ಪದೇ ಹೇಳುತ್ತಿರುತ್ತಾರೆ.ಹಾಗಾಗಿ ತಮ್ಮ ಮಾರ್ಗದರ್ಶಕರಾಗಿರುವ ಹಿರಿಯರನ್ನು ಸನ್ಮಾನ ಮಾಡುವ ಮೂಲಕ,ಅವರಿಗೆ ಹಲವಾರು ರೀತಿಯ ಮೋಜಿನ ಆಟಗಳನ್ನು ಆಡಿಸುವ ಮೂಲಕ ಅವರ ಸಂಭ್ರಮದೊಂದಿಗೆ ತಮ್ಮ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿರಿಯ ನಾಗರಿಕರಲ್ಲಿ ಹೊಸ ಚೈತನ್ಯ ಮೂಡಿಸಬೇಕು ಅವರಲ್ಲಿ ಜೀವನೋತ್ಸಾಹ ತುಂಬಬೇಕು,ಆತ್ಮಸ್ಥೈರ್ಯ ಹೆಚ್ಚಿಸಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ.ಈ ಹಿನ್ನೆಲೆಯಲ್ಲಿ ವಿವಿಧ ಆಟಗಳು, ಸಂವಾದ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮ್ಯೂಸಿಕಲ್ ಚೇರ್,ಗನ್ -ಬಲೂನ್ ಶೂಟಿಂಗ್,ರಿಂಗ್ ಇನ್ ವಿಕೆಟ್ಸ್,ಅಂಡರ್ ವಾಟರ್ ಕ್ವೈಯಿನ್ ಚಾಲೇಂಜ್, ಲಿಂಬು-ಚಮಚಾ ಸೇರಿದಂತೆ 10ಕ್ಕೂ ಹೆಚ್ಚು ಮೋಜಿನ ಆಟಗಳೊಂದಿಗೆ ಹಿರಿಯರ ಮನರಂಜಿಸಲಾಗುವುದು ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ನಿರಂತರ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಇದ್ದರೆ ಇಂತಹ ಜನಪ್ರತಿನಿಧಿಗಳಿರಬೇಕು ಎನ್ನುವ ಅಭಿಪ್ರಾಯ ಜನರಲ್ಲಿ ಬಂದಿದೆ. ನಾವು ಹಳ್ಳಿಗಳಿಗೆ ಕಾರ್ಯಕ್ರಮಗಳಿಗೆ ಹೋದ ಸಂದರ್ಭದಲ್ಲಿ `ನುಡಿದಂತೆ ನಡೆದ ತಾಯಿ’ ಎನ್ನುವ ಫ್ಲೆಕ್ಸ್ ಗಳನ್ನು ಹಳ್ಳಿ ಹಳ್ಳಿಗಳಲ್ಲಿ ಜನರೇ ಸ್ವಯಂ ಸ್ಫೂರ್ತಿಯಿಂದ ಅಳವಡಿಸುತ್ತಿದ್ದಾರೆ.
ಚಿನ್ನದ ಸರ ನೀಡಿ, ಮನೆಗೆ ಬಂದು ಸೀರೆ ಬಾಗಿನ ಅರ್ಪಿಸಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸದಿಂದಾಗಿ ಇಡೀ ಕ್ಷೇತ್ರದ ಜನರಲ್ಲಿ ತಾವು ಮತ ಹಾಕಿ ಆರಿಸಿ ತಂದಿದ್ದಕ್ಕೆ ಸಾರ್ಥಕತೆ,ಸಂತೃಪ್ತಿಯ ಭಾವನೆ ನಿರ್ಮಾಣವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ವಿವರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಉಪಸ್ಥಿತರಿದ್ದರು.

