ಸಾಹುಕಾರ್ ಹೊಸ ಆಟ ; ಚನ್ನಪಟ್ಟಣ ಅಖಾಡಕ್ಕೆ ಜಾರಕಿಹೊಳಿ…?
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ರಮೇಶ್ ಜಾರಕಿಹೊಳಿ ಒಬ್ಬರು. ಈಗ ತಮ್ಮ ರಾಜಕೀಯ ವಿರೋಧಿ ಬಣದ ನಾಯಕ ಡಿಕೆಶಿ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ಸಾಹುಕಾರ್ ಸಿದ್ದವಾರದಾ ಎಂಬ ಮಾತು ಜೋರಾಗಿವೆ.
ಈಗಾಗಲೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ. ಆ ಕಾರಣಕ್ಕೆ ಹೈ ಪ್ರೋಫೈಲ್ ಕ್ಷೇತ್ರವಾದ ಚನ್ನಪಟ್ಟಣ ಅಖಾಡಕ್ಕೆ ಡಿ.ಕೆ ಸಹೋದರರು ಈಗಾಗಲೇ ಒಂದು ಹೆಜ್ಜೆ ಇಟ್ಟಿದ್ದಾರೆ. ಈ ಮಧ್ಯೆ ಮಾಜಿ ಶಾಸಕ ಕುಮಾರಸ್ವಾಮಿ ಕ್ಷೇತ್ರ ಕೈ ವಶಕ್ಕೆ ತಂತ್ರ ಹೆಣೆಯುತ್ತಿದ್ದಾರೆ.
ಹೌದು ಚನ್ನಪಟ್ಟಣ ಕ್ಷೇತ್ರದ ಶಾಸಕ ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಅಖಾಡಕ್ಕೆ ಇಳಿದು ಮಂಡ್ಯದಿಂದ ಸ್ಪರ್ಧಿಸಿ ಸಧ್ಯ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಈಗ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ.
ಇವೆಲ್ಲದರ ಮಧ್ಯೆ ಕಳೆದ 2019 ರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ಮುನಿಸು ಮರೆತು ಒಂದಾದಂತೆ ಕಾಣುತ್ತಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಬದ್ಧ ಎದುರಾಳಿ ಡಿಕೆಶಿ ಮಣಿಸಲು ಇಬ್ಬರು ನಾಯಕರು ಒಂದಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಈ ಹಿಂದೆ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ದೆಹಲಿ ಭೇಟಿ ನೀಡಿದ್ದ ರಮೇಶ್ ಜಾರಕಿಹೊಳಿ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಮಾಡಿ ಚನ್ನಪಟ್ಟಣ ಉಪ ಚುನಾವಣೆ ಕುರಿತು ಚರ್ಚೆ ಮಾಡಿದ್ದರು. ಜೊತೆಗೆ ಆಪ್ತ ಸ್ನೇಹಿತ ಸಿ.ಪಿ ಯೋಗೇಶ್ವರ ಅವರ ಜೊತೆ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿತ್ತು.
ಅತ್ತ ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಸಹೋದರ ಸುರೇಶ್ ಅವರ ಸೋಲಿನಿಂದ ಕಂಗೆಟ್ಟಿರುವ ಡಿಸಿಎಂ ಮತ್ತೊಂದು ಸುತ್ತಿನ ಚುನಾವಣಾ ಯುದ್ಧಕ್ಕೆ ಸಿದ್ದರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಾವು ಪ್ರತಿನಿಧಿಸುವ ಕನಕಪುರ ಕ್ಷೇತ್ರವನ್ನು ಸಹೋದರ ಸುರೇಶ್ ಗೆ ಬಿಟ್ಟುಕೊಟ್ಟು ಚನ್ನಪಟ್ಟಣ ಉಪ ಚುನಾವಣೆ ಎದುರಿಸಲು ಡಿಕೆಶಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅತ್ತ ಡಿಕೆಶಿ ಉಪ ಚುನಾವಣೆ ಕಣಕ್ಕೆ ಇಳಿಯುವ ಸುದ್ದಿ ಹೊರಬರುತ್ತಿದ್ದಂತೆ ಇತ್ತ ರಮೇಶ್ ಜಾರಕಿಹೊಳಿ ಪುಲ್ ಆ್ಯಕ್ಟಿವ್ ಆಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಸಹೋದರನ ಸೋಲಿನ ನಂತರ ಪುಟಿದೆದ್ದಿರುವ ಇವರು, ಇನ್ನೊಮ್ಮೆ ಕನಕಪುರ ಬಂಡೆಗೆ ಟಕ್ಕರ್ ಕೊಡಲು ಸಿದ್ಧತೆ ನಡೆಸಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ವಿರೋಧಿಗಳ ನಡುವೆ ನಡೆಯುತ್ತಿರು ಜಿದ್ದಾಜಿದ್ದು ಯಾವ ಮಟ್ಟಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.


