ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ; ಯಡೂರ- ಕಲ್ಲೋಳ ಬ್ಯಾರೇಜ್ ಜಲಾವೃತ
ಚಿಕ್ಕೋಡಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ವೇದಗಂಗಾ, ದೂದಗಂಗಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಪರಿಣಾಮ ತಾಲೂಕಿನ 3 ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ.
ಮಹಾರಾಷ್ಟ್ರದ ಸಾಂಗಲಿ, ಕೊಲ್ಹಾಪೂರ ಸೇರಿದಂತೆ ವಿವಿಧ ಭಾಗಗಳಲ್ಲಿ ಹಾಗೂ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನಲ್ಲಿ ಕಳೆದ 8 ದಿನಗಳಿಂದ ನಿರಂತರವಾಗಿ ಸುರುಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗುತ್ತಿದೆ.
ಪರಿಣಾಮ ಇವತ್ತು ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರ-ಕಲ್ಲೋಳ ಬ್ಯಾರೇಜ್, ಮಾಂಜರಿ-ಸೌಂದತ್ತಿ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ-ದತ್ತವಾಡ ಬ್ರಿಜ್ ಮುಳಗಡೆಯಾಗಿದೆ.
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಒಟ್ಟು 7 ಸೇತುವೆಗಳು ಜಲಾವೃತಗೊಂಡಿವೆ. ನದಿತೀರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜನಿಂದ 22,250 ಕ್ಯೂಸೆಕ್,ದೂಧಗಂಗಾ ನದಿಯಿಂದ 10,910 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜ್ ನಿಂದ ಒಟ್ಟು 33,160 ಕ್ಯೂಸೆಕನಷ್ಟು ನೀರು ಬರುತ್ತಿದೆ. ನದಿತೀರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.


