80 ನೌಕರರನ್ನು ಯಾಮಾರಿಸಲು ಹೇಗೆ ಸಾಧ್ಯ..? ಬಿಸಿಎಂ ಇಲಾಖೆಗೆ ಬೇಕಿದೆ ಚುಚ್ಚುಮದ್ದು..!
ಬೆಳಗಾವಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಅವ್ಯವಸ್ಥೆ ಕುರಿತು ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ನಡೆದಿದ್ದ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಖುದ್ದು ಸಚಿವರೇ ತಾಕೀತು ಮಾಡಿದ್ದರು.
ಇದಾದ ಎರಡೇ ದಿನಗಳಲ್ಲಿ ಸುಮಾರು 80 ಬಿಸಿಎಂ ನ ನೌಕರರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾರ್ಯವೈಖರಿ ಕುರಿತು ಆಕ್ರೋಶ ಹೊರಹಾಕಿದ್ದಲ್ಲದೆ, ಉಸ್ತುವಾರಿ ಸಚಿವರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಆದರೆ ಸಧ್ಯ ನೌಕರರರು ಸಲ್ಲಿಸಿರುವ ಮನವಿಯಲ್ಲಿ ಷಡ್ಯಂತ್ರ ಅಡಗಿದೆ ಎಂದು ಜಿಲ್ಲಾ ಅಧಿಕಾರಿ ಹೇಳುತ್ತಿದ್ದು, ಸುಮಾರು 80 ಜನ ನೌಕರರನ್ನು ಯಾಮಾರಿಸಲು ಹೇಗೆ ಸಾಧ್ಯ ಎಂಬ ಅನುಮಾನವೂ ಮೂಡಿದೆ. ಸರ್ಕಾರಿ ನೌಕರನೋರ್ವ ಸಹಿ ಹಾಕುವ ಮುಂಚೆ ಯಾವುದನ್ನೂ ಪರಿಶೀಲನೆ ಮಾಡದೆ ಕಣ್ಣುಮುಚ್ಚಿಕೊಂಡು ಇರುತ್ತಾರಾ ಎಂಬ ಪ್ರಶ್ನೇಯೂ ಹುಟ್ಟುತ್ತದೆ.
ಯಾವುದೇ ತಪ್ಪು ಮಾಡದ ಜಿಲ್ಲೆಯ ಮುಖ್ಯ ಅಧಿಕಾರಿ ವಿರುದ್ಧ ಷಡ್ಯಂತ್ರ ನಡೆದಿದ್ದೇ ಆದರೆ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಆಗಬೇಕು. ಒಂದು ವ್ಯವಸ್ಥೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಅಧಿಕಾರಿಗೆ ಕೆಟ್ಟ ಹೆಸರು ತರಲು ಯತ್ನಿಸಿದರೆ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಆಗಬೇಕಿರುವುದು ಅತೀ ಅವಶ್ಯ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯವೈಖರಿ ಮೊದಲಿನಂತೆ ಇಲ್ಲ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಖುದ್ದು ಸಚಿವ ಸತೀಶ್ ಜಾರಕಿಹೊಳಿ ಅವರ ತವರು ನೆಲದಲ್ಲಿ ಈ ರೀತಿ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬರುತ್ತಿದ್ದು ಇದು ಸರ್ಕಾರಕ್ಕೂ ಕೆಟ್ಟ ಹೆಸರು. ಈ ಕೂಡಲೇ ಸರ್ಕಾರ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ.
80 ಜನ ನೌಕರರಿಗೆ ನಿಜವಾಗಿಯೂ ಜಿಲ್ಲಾ ಅಧಿಕಾರಿಗಳಿಂದ ಕಿರುಕುಳ ಆಗಿದೆಯಾ ಅಥವಾ ಸುಖಾಸುಮ್ಮನೇ ಹಿರಿಯ ಅಧಿಕಾರಿಗಳ ಹೆಸರು ಕೆಡಿಸಲು ಷಡ್ಯಂತ್ರ ನಡೆಸಲಾಗಿದೆಯಾ ಎಂಬುದನ್ನು ಬಯಲಿಗೆಳೆಯಬೇಕು. ಜೊತೆಗೆ ನೌಕರರು ಸರ್ಕಾರದ ನಿಯಮಾವಳಿ ಪ್ರಕಾರ ತಮ್ಮ ಕರ್ತವ್ಯ ನಿರ್ವಹಿಸುವಂತಾಗಲಿ ಎಂಬುದು ಜನರ ಆಶಯ.


