ಬೆಳಗಾವಿ : ಸಕ್ಕರೆ ಮೇಲಿನ ಎಂಎಸ್ ಪಿ ದರ ನಿಗದಿಯಾಗುವ ವರೆಗೆ ಕಾರ್ಖಾನೆಗಳು ಸಕ್ಕರೆ ದಾಸ್ತಾನು ಮಾರುಕಟ್ಟೆಗೆ ಬಿಡದಂತೆ ರೈತ ಸಂಘಟನೆ ಮಾಡಿದ್ದ ಮನವಿಯನ್ನು ಗಾಳಿಗೆ ತೂರಿ ಬೃಹತ್ ಲಾರಿಯಲ್ಲಿ ಸಕ್ಕರೆ ಸಾಗಿಸುವ ವೇಳೆ ರೈತ ಹೋರಾಟಗಾರರ ಕೈಗೆ ಸಿಕ್ಕಿಬಿದ್ದ ಘಟನೆ ಬುಧವಾರ ನಡೆದಿದೆ.

ಜೈಲ್ ಭರೋ ಚಳುವಳಿ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ರೈತರು ಪಾದಯಾತ್ರೆ ಮಾಡುವ ವೇಳೆ ಬೃಹತ್ ಲಾರಿ ತುಂಬ ಸಕ್ಕರೆ ಸಾಗಿಸುವುದು ಕಂಡುಬಂದ ಹಿನ್ನೆಲೆಯಲ್ಲಿ ಲಾರಿ ವಶಕ್ಕೆ ಪಡೆದ ರೈತರು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆಯಿತು.

ಇತ್ತ ಕಬ್ಬು ಬೆಳೆಗಾರರ ಬೇಡಿಕೆ ಕುರಿತು ಕಳೆದ ಹದಿನೈದು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ಸಕ್ಕರೆ ಕಾರ್ಖಾನೆಗಳು ಕಳ್ಳ ಸಾಗಾಣಿಕೆ ಮೂಲಕ ಸಕ್ಕರೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೈತರಿಗೆ ನ್ಯಾಯ ಸಿಗುವವರೆಗೆ ತಾಳ್ಮೆಯಿಂದ ಇರದ ಕಾರ್ಖಾನೆಗಳ ವಿರುದ್ಧ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.