ಬಯಲೊಳಗೆ ಬಯಲಾದ ಶರಣ ಚೇತನ ; ಬದುಕಿನ ಪಯಣ ಮುಗಿಸಿದ ಮಹಾಂತೇಶ
ಬೆಳಗಾವಿ : ಬಯಲು ಆಲಯದೊಳಗೆ ಇಂದು ಶರಣ ಚೇತನವೊಂದು ಬಯಲಾಗಿ ಸಾಗಿದೆ. ಕಾಯಕದ ಮೂಲಕವೇ ಜನರ ಹೃದಯ ಗೆದ್ದ ಅಪರೂಪದ ವ್ಯಕ್ತಿತ್ವ ಪಂಚಭೂತಗಳಲ್ಲಿ ಲೀನವಾಗಿದೆ.
ಮಂಗಳವಾರ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಅಂತ್ಯಕ್ರಿಯೆ ಹುಟ್ಟೂರು ರಾಮದುರ್ಗದಲ್ಲಿ ನೆರವೇರಿತು. ಇವರ ಜೊತೆಗೆ ಇನ್ನುಳಿದ ಮೂವರು ತಮ್ಮ ಬದುಕಿನ ಪಯಣ ಮುಗಿಸಿ ಹೊರ ಜಗತ್ತಿಗೆ ಜೊತೆಯಾಗಿ ಸಾಗಿದರು.
ಮಂಗಳವಾರ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ (51), ಸಹೋದರ ಸಂಬಂಧಿಗಳಾದ ಶಂಕರ ಬೀಳಗಿ (53) ಹಾಗೂ ವೀರಣ್ಣ ಬೀಳಗಿ (55)
ಸ್ನೇಹಿತ ಈರಣ್ಣ ಸಿರಸಂಗಿ ಅವರ ಅಂತ್ಯಕ್ರಿಯೆ ರಾಮದುರ್ಗ ಪಟ್ಟಣದ ಹಲಗತ್ತಿ ಬೈಪಾಸ್ ರಸ್ತೆಯಲ್ಲಿರುವ ಬೀಳಗಿಯವರ ತೋಟದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿತು.
ಪಟ್ಟಣದ ಹೊರ ವಲಯದ ಪಂಚಕಟ್ಟಿ ಶಾಲಾ ಮೈದಾನದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಹಲಗತ್ತಿ ಬೈಪಾಸ್ ರಸ್ತೆಯಲ್ಲಿರುವ ತೋಟದಲ್ಲಿ ಮಹಾಂತೇಶ ಹಾಗೂ ಅವರ ಸಹೋದರರ
ಅಂತ್ಯಕ್ರಿಯೆ ಹಿಂದು ವಿಧಿ ವಿಧಾನಗಳ ಪ್ರಕಾರ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಿತು. ಪೊಲೀಸ್ ಸಿಬ್ಬಂದಿ ಮೃತರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಗಾಳಿಯಲ್ಲಿ ಮೂರು ಸುತ್ತ ಗುಂಡು ಹಾರಿಸಿ ಹಿರಿಯ ಅಧಿಕಾರಿಗೆ ಅಂತಿಮ ವಿದಾಯ ಹೇಳಿದರು.
ಅಂತಿಮ ದರ್ಶನ ಪಡೆದ ಅಧಿಕಾರಿ ವರ್ಗ
ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಅಂತಿಮ ದರ್ಶನವನ್ನು ಪಡೆದುಕೊಂಡ ಅಧಿಕಾರಿ ವರ್ಗ ಆಪ್ತ ಸ್ನೇಹಿತನ ನೆನೆದು ಕಂಬನಿ ಮಿಡಿದರು. ರಾಜ್ಯ ಅಗ್ನಿಶಾಮಕ ದಳದ ಡಿಐಜಿಪಿ ರವಿ ಚನ್ನನ್ನಣ್ಣವರ, ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತೆ ಕೆ.ಎಂ ಜಾನಕಿ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್, ಶಾಸಕ ಅಶೋಕ ಪಟ್ಟಣ ಸೇರಿದಂತೆ ಸಾವಿರಾರು ಸಂಖ್ಯೆ ಜನ ಅಂತಿಮ ದರ್ಶನ ಪಡೆದುಕೊಂಡರು.


