ಬೆಳಗಾವಿಯಲ್ಲಿ ಸಿಡಿದೆದ್ದ ಅನ್ನದಾತರು ; ಸರಕಾರದ ವಿರುದ್ಧ ಆಕ್ರೋಶ
ಬೆಳಗಾವಿ : ವೈಜ್ಞಾನಿಕ ಬೆಲೆ ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ಬೀದಿಗಿಳಿಯುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನೀಡುವಂತೆ ಆಗ್ರಹಿಸಿ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗುರುವಾರ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ನ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ತಡೆದ ಸಾವಿರಾರು ರೈತರು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ರೈತ ಸಂಘಟನೆ ಜೊತೆ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಪಕ್ಷದ ಮುಖಂಡರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.


