ತುತ್ತು ಅನ್ನಕ್ಕಾಗಿ ಪರದಾಟ ; ತಾಯಿಯ ಹಸಿವು ನೋಡಲಾಗದೆ ಮಗ ಆತ್ಮಹತ್ಯೆಗೆ ಶರಣು
ಬೆಳಗಾವಿ : ತುತ್ತು ಅನ್ನಕ್ಕಾಗಿ ಪರದಾಡಿ ತಾಯಿಯ ಹಸಿವು ನೋಡಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ (30) ಮೃತಪಟ್ಟ ಯುವಕ. ತೀವ್ರ ಬಡತನದಲ್ಲಿದ್ದ ಯುವಕನ ಕುಟುಂಬ ಕಳೆದ ಕೆಲ ದಿನಗಳ ಹಿಂದೆ ಗೋವಾ ಗೆ ವಲಸೆ ಹೋಗಿದ್ದರು. ಅಲ್ಲಿಯೂ ಎಷ್ಟೇ ಅಲೆದಾಡಿದರು ಕೆಲಸ ಸಿಗದೆ ಯುವಕ ತನ್ನ ತಾಯಿ ಶಾಂತವ್ವ (55) ಜೊತೆ ಮರಳಿ ಹುಬ್ಬಳ್ಳಿಗೆ ರೈಲಿನ ಮೂಲಕ ಬರುತ್ತಿದ್ದ. ಈ ಸಂದರ್ಭದಲ್ಲಿ ಟಿಕೆಟ್ ಇಲ್ಲದ ಕಾರಣ ಅಳ್ನಾವರ ರೈಲು ನಿಲ್ದಾಣದಲದಲಿ ಇವರನ್ನು ಅಧಿಕಾರಿಗಳು ಇಳಿಸಿದ್ದರು.
ಈ ಸಂದರ್ಭದಲ್ಲಿ ನಾಲ್ಕು ದಿನದಿಂದ ತಾಯಿ ಹಾಗೂ ಮಗ ಹಸಿವಿನಿಂದ ಅನ್ನಕ್ಕಾಗಿ ಅಲೆದಾಡಿದರು ಊಟ ಸಿಕ್ಕಿರಲಿಲ್ಲ. ನಿತ್ರಾಣಗೊಂಡ ತಾಯಿಯನ್ನು ರೈಲು ನಿಲ್ದಾಣದಲ್ಲಿ ಬಿಟ್ಟಿದ್ದ ಯುವಕ ಊಟಕ್ಕಾಗಿ ಊರೂರು ಅಲೆದಾಡಿದ್ದಾನೆ. ಈ ಸಂದರ್ಭದಲ್ಲಿ ಯಾರೂ ಸಹಾಯಕ್ಕೆ ಬರದ ಕಾರಣ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಯುವಕನ ಶವವನ್ನು ಕಂಡ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಅಂತಿಮ ವಿಧಿ ವಿಧಾನಗಳುನ್ನು ಮುಗಿಸಿದ್ದು ನಂತರದಲ್ಲಿ ಈ ಘಟನೆ ಹಿಂದಿನ ಕರಾಳ ನೋವು ಬಯಲಾಗಿದೆ. ಈ ಘಟನೆ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


