Select Page

Advertisement

ಬೆಳಗಾವಿ ಕೆ.ಕೆ.ಕೊಪ್ಪ ಗುಡ್ಡದಲ್ಲಿ ಮಿನಿ ತಿರುಪತಿ ನಿರ್ಮಾಣ

ಬೆಳಗಾವಿ ಕೆ.ಕೆ.ಕೊಪ್ಪ ಗುಡ್ಡದಲ್ಲಿ ಮಿನಿ ತಿರುಪತಿ ನಿರ್ಮಾಣ

ಬೆಳಗಾವಿ : ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಮಾದರಿಯಲ್ಲಿಯೇ ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಗುಡ್ಡದಲ್ಲಿ ವೆಂಕಟೇಶ್ವರ ದೇವಸ್ಥಾನ, ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದು ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರು ತಿಳಿಸಿದರು.

ನಗರದ ರಡ್ಡಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಗುಡ್ಡದಲ್ಲಿ ವೆಂಕಟೇಶ್ವರ ದೇವಸ್ಥಾನ, ಕಲ್ಯಾಣ ಮಂಟಪ ನಿರ್ಮಾಣದ ಭೂಮಿ ಪೂಜೆ ಮತ್ತು ಅಡಿಗಲ್ಲು ಸಮಾರಂಭ ಜೂನ್ 6ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಆರ್ಥಿಕ ಸಹಾಯಧನ ಕಲ್ಪಿಸಲಾಗುವುದು. ಜತೆಗೆ ಕೆ.ಕೆ.ಕೊಪ್ಪ ಗ್ರಾಮದ ಗುಡ್ಡದಲ್ಲಿ ನಿರ್ಮಾಣಗೊಳ್ಳಲಿರುವ ವೆಂಕಟೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಎಲ್ಲ ಸಮುದಾಯದ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಕಾಂತು ಜಾಲಿಬೇರಿ ಮಾತನಾಡಿ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಸಲ್ಲಿಸಬೇಕು ಎಂಬ ಸಂಕಲ್ಪದೊಂದಿಗೆ ಸ್ಥಾಪನೆಗೊಂಡಿರುವ ಬೆಳಗಾವಿ ರಡ್ಡಿ ಸಂಘ ಸದಾ ಪಕ್ಷಾತೀತ, ಜ್ಯಾತ್ಯಾತೀತವಾಗಿ ತನ್ನ ಕಾರ್ಯ ನಡೆಸಿಕೊಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ವೆಂಕಟೇಶ್ವರ ದೇವಸ್ಥಾನದಿಂದ ಆದಾಯದಿಂದ ಶೈಕ್ಷಣಿಕ

ಸಂಸ್ಥೆಗಳನ್ನು ಆರಂಭಿಸುವ ಗುರಿ ಹಾಕಿಕೊಂಡಿದ್ದೇವೆ. ಎಲ್ಲ ವರ್ಗದ ಜನರು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು ಸ್ವಯಂ ಪ್ರೇರಿತವಾಗಿ ದೇವಸ್ಥಾನಕ್ಕೆ ಆರ್ಥಿಕ ಧನಸಹಾಯ ಮಾಡಲು ಮುಂದೆ ಬಂದಿದ್ದಾರೆ. ಹೀಗಾಗಿ ಎಲ್ಲ ಸಮುದಾಯದ ದಾನಿಗಳ ಸಹಾಯ ಪಡೆದುಕೊಳ್ಳುತ್ತೇವೆ ಎಂದರು.

ಸಂಘದ ನಿರ್ದೇಶ ಬಸನಗೌಡ ಕಾಮನಗೌಡರ ಮಾತನಾಡಿ, ಕೆ.ಕೆ.ಕೊಪ್ಪ ಗ್ರಾಮದ ಗುಡ್ಡದಲ್ಲಿ ತಿರುಪತಿ ದೇವಸ್ಥಾನ ಮಾದರಿಯಲ್ಲಿಯೇ ಬೆಳಗಾವಿಯಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸುತ್ತಿದ್ದೇವೆ. ತಿರುಪತಿ ಟ್ರಸ್ಟ್‌ನವರು ವೆಂಕಟೇಶ್ವರ ಮೂರ್ತಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಅಲ್ಲದೆ, ದೇವಸ್ಥಾನಕ್ಕೆ ಪೂಜಾರಿಗಳನ್ನು ಅವರೇ ನಿಯೋಜನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳವನ್ನಾಗಿಸಲು ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಅವತ್ತಿನ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ 1200ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಂಘದ ನಿರ್ದೇಶಕಿ ಲತಾ ಅರಕೇರಿ, ಶಾಂತಾ ಆರ್.ಜಂಗಲ, ಪ್ರಕಾಶ ಕಕರಡ್ಡಿ, ಮಂಜುನಾಥ ಪಾಟೀಲ, ಪರಮೇಶ್ವರ ಮುಳ್ಳೂರು, ರಾಮಣ್ಣ ಅರಕೇರಿ, ಬಿ.ಎ.ಹಸರಡ್ಡಿ, ನಾರಾಯಣ ಕೆಂಚರಡ್ಡಿ, ರವೀಂದ್ರ ಹಿರೇದೇಸಾಯಿ, ಶ್ರೀನಿವಾಸ ಬಿಸನಕೊಪ್ಪ, ಗಿರೀಶ ಮಳಲಿ, ವೆಂಕಟೇಶ ಸೋನವಾಲ್ಕರ್, ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ ಇತರರಿದ್ದರು.
……………

ದೇವಸ್ಥಾನ ಅಡಿಗಲ್ಲು ಸಮಾರಂಭಕ್ಕೆ ಗಣ್ಯರು :

ವೆಂಕಟೇಶ್ವರ ದೇವಸ್ಥಾನ, ಕಲ್ಯಾಣ ಮಂಟಪ ನಿರ್ಮಾಣದ ಭೂಮಿ ಪೂಜೆ ಮತ್ತು ಅಡಿಗಲ್ಲು ಸಮಾರಂಭದ ದಿವ್ಯ ಸಾನಿಧ್ಯವನ್ನು ಹರಿಹರ ತಾಲೂಕಿನ ಎರೆಹೊಸಳ್ಳಿ ಗ್ರಾಮದ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು ವಹಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ವೆಂಕಟೇಶ್ವರ ದೇವಸ್ಥಾನಕ್ಕೆ ,ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಾಲಾಜಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಜಗದೀಶ ಶೆಟ್ಟರ್, ರಾಜ್ಯ ಸಭಾಸದಸ್ಯ ಈರಣ್ಣಾ ಕಡಾಡಿ, ಶಾಸಕ ಅಭಯ ಪಾಟೀಲ,ಆಸೀಫ್ ಸೇಠ್ ಇತರರದು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ರಾಮಣ್ಣ ಮುಳ್ಳೂರು ವಿವರಿಸಿದರು.

Advertisement

Leave a reply

Your email address will not be published. Required fields are marked *

error: Content is protected !!