ಸಹೋದರನ ಕಾರ್ಖಾನೆಗೆ ಡಿಸಿಸಿ ಬ್ಯಾಂಕಿನಿಂದ ಕೋಟ್ಯಾಂತರ ರೂ ಸಾಲ ; ಸಾಹುಕಾರ್ ಸ್ಪಷ್ಟನೆ
ಬೆಳಗಾವಿ : ಸಹೋದರನ ಒಡೆತನದ ಸೌಭಾಗ್ಯಲಕ್ಷ್ಮೀ ಕಾರ್ಖಾನೆಗೆ ಡಿಸಿಸಿ ಬ್ಯಾಂಕ್ ನಿಂದ ಸಾಲ ನೀಡಿಲ್ಲ, ಲಕ್ಷ್ಮೀನಾರಾಯಣ ಸಂಸ್ಥೆಗೆ 160 ಕೋಟಿ ಸಾಲ ನೀಡಿಲಾಗಿದ್ದು, ಸಂಸ್ಥೆಯ 330 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶ್ಯೂರಿಟಿಯಾಗಿ ನೊಂದಣಿ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಸಿ ಬ್ಯಾಂಕ್ ನಿಂದ ಸಾಲ ನೀಡಲಾಗಿದೆ ಎಂಬುದು ಸುಳ್ಳು ಆರೋಪ. ಸಕ್ಕರೆ ಕಾರ್ಖಾನೆಗೂ ಸಾಲ ನೀಡಿಲ್ಲ. ಒಂದು ಸಂಸ್ಥೆಗೆ ಕಾನೂನು ರೀತಿಯಲ್ಲಿ ಸಾಲ ನೀಡಿದ್ದೇವೆ. 8 ವರ್ಷಗಳ ಅವಧಿಯಲ್ಲಿ ಸಾಲ ಮರುಪಾವತಿ ಆಗದಿದ್ದರೆ ನಾನೇ ಮುಂದೆ ನಿಂತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವೆ ಎಂದರು.
ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಟ್ಟಿಯಾಗಿ ಬ್ಯಾಂಕ್ ಮುನ್ನಡೆದಿದೆ. ಈ ವರ್ಷವೂ ಹೆಚ್ಚಿನ ಆದಾಯ ಗಳಿಸುವ ಮೂಲಕ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ರೈತರಿಗೆ ಅನುಕೂಕವಾಗುವ ದೃಷ್ಟಿಯಿಂದ ಇನ್ನೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ ಬ್ಯಾಂಕ್ ನಮ್ಮದಾಗಿದೆ. ವಸೂಲಾತಿಯೂ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ಯಾವುದೇ ಕಾರ್ಖಾನೆಯ ಕಟಬಾಕಿ ಉಳಿದಿಲ್ಲ ಎಂದರು.
ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾರೇ ಇದ್ದರೂ ಬ್ಯಾಂಕ್ ನಿರಂತರವಾಗಿ ಮುನ್ನಡೆಯಲಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ನಿಲ್ಲುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಅನೇಕ ಶಾಸಕರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಬ್ಯಾಂಕಿನ ಒಳಗೆ ಯಾವುದೇ ರಾಜಕಾರಣ ಇಲ್ಲ. ಹೊರಗೆ ಎಷ್ಟೇ ರಾಜಕೀಯ ಜಗಳವಿದ್ದರೂ ಬ್ಯಾಂಕ್ ವಿಷಯ ಬಂದಾಗ ಎಲ್ಲರೂ ಒಂದೇ ರಾಜಕಾರಣವಾದರೆ ರೈತರ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ರಾಜಕೀಯವಿಲ್ಲದೇ ಬ್ಯಾಂಕ್ ಸಾಗಲಿದೆ ಎಂದರು.
ನಾನಂತೂ ಬಿಡಿಸಿಸಿ ಚುನಾವಣೆಗೆ ಸ್ಪರ್ದಿಸುವುದಿಲ್ಲ. ಆದರೆ ನಮ್ಮ ಮಾರ್ಗದಶನದಲ್ಲಿಯೇ ಆಡಳಿತ ಮಂಡಳಿ ಗೆಲ್ಲಲಿದೆ. ಅಕ್ಟೋಬರ್‌ನಲ್ಲಿ ನಮ್ಮವರೇ ಅಧ್ಯಕ್ಷ-ಉಪಾಧ್ಯಕ್ಷರಾಗುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.


