ನಾಳೆ ಒಕ್ಕುಂದ ಗ್ರಾಮದಲ್ಲಿ “ಜಗಜ್ಯೋತಿ ಶ್ರೀ ಬಸವೇಶ್ವರ ಪೌರಾಣಿಕ ನಾಟಕ”
ಬೈಲಹೊಂಗಲ: ತಾಲ್ಲೂಕಿನ ಒಕ್ಕುಂದ ಗ್ರಾಮದಲ್ಲಿ ಜನವರಿ 1ರಂದು ಸೋಮವಾರ ಜಗಜ್ಯೋತಿ ಶ್ರೀ ಬಸವೇಶ್ವರ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸೋಮವಾರ ಸಾಯಂಕಾಲ 6 ಗಂಟೆಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ನಾಟ್ಯಭೂಷಣ ಕೆ.ಡಿ.ನದಾಫ ರಂಗಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಹನಾಯಿ ವಾದನ, ಜಾನಪದ ಗೀತೆಗಳು, ಡೊಳ್ಳು ಕುಣಿತ, ತತ್ವಪದ, ಸುಗಮ ಸಂಗೀತ, ನೃತ್ಯ ವೈವಿಧ್ಯ, ವೀರಗಾಸೆ, ಕಥಾಕೀರ್ಥನ, ಭಜನೆ ಕಾರ್ಯಕ್ರಮಗಳು ಜರುಗಲಿವೆ.
ಇದಾದ ಬಳಿಕ ರಾತ್ರಿ 10 ಗಂಟೆಗೆ ನಂದಕುಮಾರ ದೊಡವಾಡ ಅವರಿಂದ ರಚಿಸಲ್ಪಟ್ಟ, ಗದ್ದಿಕರವಿನಕೊಪ್ಪ ಗ್ರಾಮದ ಮಲ್ಲನಗೌಡ ಪಾಟೀಲ ಮತ್ತು ತಂಡದಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಪೌರಾಣಿಕ ನಾಟಕ ಪ್ರದರ್ಶನವಿದೆ. ಈ ಪೌರಾಣಿಕ ನಾಟಕವು 116ನೇ ಪ್ರಯೋಗ ಎಂಬುದು ವಿಶೇಷ.
ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಣ್ಣ ಭದ್ರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ತಹಶೀಲ್ದಾರ ಸಚ್ಚಿದಾನಂದ ಕುಚನೂರ, ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ ಆಗಮಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


