ಬೆಳಗಾವಿ: ಪ್ರೀತಿಸುವಂತೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಾರಿಮನಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಮಾಯಪ್ಪ ಹಳೇಗೋಡಿ (22) ಮೃತರು. ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಎಂಬಾತನಿಂದ ಕೃತ್ಯ ನಡೆದಿದೆ.

ಆರೋಪಿ ಫಕೀರಪ್ಪನ‌ ಪುತ್ರಿಯನ್ನು ಪ್ರೀತಿಸುವಂತೆ ಯಲ್ಲಪ್ಪ ಹಳೇಗೋಡಿ ಬೆನ್ನುಬಿದಿದ್ದನಂತೆ ಈ ವಿಷಯ ಗೊತ್ತಾಗಿ ಪುತ್ರಿಯ ತಂಟೆಗೆ ಬರಬೇಡ ಎಂದು ಯುವಕನಿಗೆ ವಾರ್ನ್ ಮಾಡಲು ಕಾರಿಮನಿಗೆ ಫಕೀರಪ್ಪ ಹೋಗಿದ್ದಾನೆ.

ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ಹಳೇಗೋಡಿ ಮಧ್ಯೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಆಗ ಯಲ್ಲಪ್ಪನಿಗೆ ಚಾಕುವಿನಿಂದ ಫಕೀರಪ್ಪ ಇರಿದಿದ್ದಾನೆ. ಯಲ್ಲಪ್ಪನನ್ನು‌ ಬಿಡಿಸಿಕೊಳ್ಳಲು ಬಂದ ಸಹೋದರ ಮಾಯಪ್ಪನಿಗೂ ಚಾಕುವಿನಿಂದ ‌ಇರಿದಿದ್ದು ತೀವ್ರ ರಕ್ತಸ್ರಾವದಿಂದ ಯಲ್ಲಪ್ಪ ಸ್ಥಳದಲ್ಲೇ ಸಾವವನ್ನಪ್ಪಿದ್ದಾನೆ.

ಚಿಕಿತ್ಸೆ ‌ಫಲಿಸದೇ ಆಸ್ಪತ್ರೆಯಲ್ಲಿ ‌ಮಾಯಪ್ಪ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಪರಾರಿಯಾಗಿರುವ ಫಕೀರಪ್ಪ ಭಾಂವಿಹಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ‌ರಾಮದುರ್ಗ ಡಿವೈಎಸ್‌ಪಿ ಭೇಟಿ, ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.