HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆ
ಬೆಂಗಳೂರು : ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ ( ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ – High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ ನೀಡಿದ ಗಡುವು ಸಮೀಪ ಬಂದಿದೆ.
ಈ ವಿಚಾರವು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿದೆ. ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ಅವಧಿಯನ್ನು ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆ ಗಡುವು ವಿಸ್ತರಿಸುವಂತೆ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದರು. ಈವರೆಗೆ ಹೆಚ್ಚಿನ ವಾಹನಗಳು ನೋಂದಣಿ ಮಾಡಿಸಿಕೊಂಡಿಲ್ಲ. 18 ಲಕ್ಷ ವಾಹನಗಳಷ್ಟೇ ಈಗ ನೋಂದಣಿ ಆಗಿವೆ. ಅಲ್ಲದೆ, ಇದರ ಬಗ್ಗೆ ಆನ್‌ಲೈನ್ ವಂಚನೆ ಸಹ ನಡೆಯುತ್ತಿದೆ. ಹೀಗಾಗಿ ಅವಧಿಯನ್ನು ವಿಸ್ತರಣೆ ಮಾಡುವುದರ ಜತೆಗೆ ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಆಗ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೋಂದಣಿಯನ್ನು ವಿಸ್ತರಣೆ ಮಾಡುವ ಬಗ್ಗೆ ಸರ್ಕಾರವೂ ಚಿಂತನೆ ನಡೆಸಿದ್ದು, ಮತ್ತೆ ಮೂರು ತಿಂಗಳು ಮುಂದಕ್ಕೆ ಹಾಕುತ್ತೇವೆ. ಅಲ್ಲದೆ, ಈ ಸಂಬಂಧ ಆನ್‌ಲೈನ್ ವಂಚನೆ ಬಗ್ಗೆ ಗಮನಹರಿಸುತ್ತೇವೆ ಎಂದು ಹೇಳಿದರು


