ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲು ; ಯಾವ ಪ್ರಕರಣ, ಇಲ್ಲಿದೆ ಮಾಹಿತಿ
ಬೆಂಗಳೂರು : ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾಜಿ ಸಚಿವರು ಸೇರಿಂದಂತೆ ನಾಲ್ವರು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಾಲ ಪಡೆದು ಮರು ಪಾವತಿಸಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ರಾಜಣ್ಣ ವಿವಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೋಕಾಕ್ ನ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ರಮೇಶ್ ಜಾರಕಿಹೊಳಿ, ನಿರ್ದೇಶಕ ವಸಂತ್ ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಪಾವಡೆ ಅವರು ಕಾರ್ಖಾನೆ ಸ್ಥಾಪನೆ, ವಿಸ್ತರಣೆ, ನಿರ್ವಹಣೆಗಾಗಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಆರೋಪಿಗಳು ವಿಧಿಸಿದ ಷರತ್ತುಗಳನ್ನು ಒಪ್ಪಿ, ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹ ಬ್ಯಾಂಕ್ ಗಳಿಂದ 2013ರ ಡಿಸೆಂಬರ್ 7ರಿಂದ 2017ರ ಮಾರ್ಚ್ 31ರ ವರೆಗೆ ಹಂತ ಹಂತವಾಗಿ 232.88 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ, ಸಾಲದ ಹಣ ಕಟ್ಟದೆ 439.07 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.
ಆರೋಪಿಗಳು ಸಾಲ ಪಡೆಯುವ ಸಂದರ್ಭದಲ್ಲಿ ಸೌಭಾಗ್ಯ, ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದರು. ಸಾಲ ಪಡೆದ ನಂತರ ತೀರಿಸದೆ ಕಂಪನಿಯ ಜವಾಬ್ದಾರಿಯಿಂದ ಹೊರಬಂದು ಬೇರೆಯವರಿಗೆ ಅಧಿಕಾರ ನೀಡಿದ್ದಾರೆ.
ಸಾಲ ಮರುಪಾವತಿಯಾಗುವವರೆಗೆ ಬ್ಯಾಂಕಿನ ಅನುಮತಿ ಇಲ್ಲದೇ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಗಲಿ. ನಿರ್ದೇಶಕರನ್ನಾಗಲಿ ಬದಲಾಯಿಸುವಂತಿಲ್ಲ. ಆದರೆ, ಇವರು ಬದಲಾಯಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಹೀಗಾಗಿ ಶಾಸಕರು ಸೇರಿದಂತೆ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.


