ನಕಲಿ ಪತ್ರಕರ್ತರ ಹಾವಳಿ ಕಡಿವಾಣಕ್ಕೆ ಆಗ್ರಹ ; ಎಸ್ಪಿ ಫೋನ್ ಇನ್ ನಲ್ಲಿ ಸಮಸ್ಯೆಗಳ ಸುರಿಮಳೆ
ಬೆಳಗಾವಿ : ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದು ಕ್ರಮ ಕೈಗೊಳ್ಳುವಂತೆ ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಅಥಣಿಯ ವ್ಯಕ್ತಿ ಒಬ್ಬರು ತಮ್ಮ ಸಮಸ್ಯೆ ಹೇಳಿಕೊಂಡರು.
ಶುಕ್ರವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಆಯೋಜಿದಲಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ. ಭೀಮಾಶಂಕರ ಗುಳೇದ ನೇತೃತ್ವದ ತಂಡ 19ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು.
ಜಿಲ್ಲೆಯ ಜನರ ಸಮಸ್ಯೆಯನ್ನು ಆಲಿಸಲು ಹಿಂದಿನ ಎಸ್ಪಿ ಡಾ. ಸಂಜೀವ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿದ್ದ ಫೋನ್ ಇನ್ ಕಾರ್ಯಕ್ರಮವನ್ನು ಎಸ್ಪಿ ಡಾ. ಭೀಮಾಶಂಕರ ಗುಳೇದ ಮುಂದುವರೆಸಿದ್ದು ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಕಂಡುಕೊಂಡರು.
ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮರಾಟ, ಕೌಟುಂಬಿಕ ಸಮಸ್ಯೆ, ಸಂಚಾರ ಸಮಸ್ಯೆ. ಹಣಕಾಸಿನ ವ್ಯವಹಾರ,
ಅಥಣಿಯ ವ್ಯಕ್ತಿಯೋರ್ವ ಕರೆ ಮಾಡಿ ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆಗಟ್ಟುವಂತೆ ಮನವಿ ಮಾಡಿದರು. ಅಲ್ಲದೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ. ಭೀಮಾಶಂಕರ ಗುಳೇದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ವ್ಯಕ್ತಿಯೋರ್ವ ಕರೆ ಮಾಡಿ, ನಗರದ ಚನ್ನಮ್ಮ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೇನೆ ಎಂದು ನೋಟಿಸ್ ನೀಡಿದ್ದಾರೆ. ನಂದು ಕಾರ್ ಇದೆ. ಆದರೆ ಬೈಕ್ ಫೋಟೋ ಕಳುಹಿಸಿದ್ದಾರೆ. ಅದು ನಂದಲ್ಲ ಎಂದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಬಂಧಿಸಿದ ನಗರ ಪೊಲೀಸರಿಗೆ ತಿಳಿಸಲಾಗುವುದು ಎಂದರು.
ಬೈಲಹೊಂಗಲ ವ್ಯಕ್ತಿಯೋರ್ವ ಕರೆ ಮಾಡಿ, ಯರಗಟ್ಟಿ ತಾಲೂಕಿನ ಖಾಸಗಿ ಸೊಸೈಟಿಯಲ್ಲಿ ಠೇವಣಿ ಹಣ ಇಡಲಾಗಿದೆ. ಇದು ಬಂದ ಆಗಿ ಮೂರು ವರ್ಷವಾಗಿದೆ. ಠೇವಣಿ ಇಟ್ಟ ಹಣ ಮರಳಿಕೊಡಿಸಬೇಕೆಂದು ಕರೆ ಮಾಡಿ ಮನವಿ ಮಾಡಿದರು.
ರಾಯಬಾಗ ತಾಲೂಕಿನ ವ್ಯಕ್ತಿಯೋರ್ವ ಕರೆ ಮಾಡಿ, ಇಲ್ಲಿನ ಪೊಲೀಸ್ ಒಬ್ಬ ಜಮೀನಿನಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಇವನ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಎಲ್ಲ ಕರೆಯನ್ನು ಸ್ವೀಕರಿಸಿ ಜನರ ಸಮಸ್ಯೆ ಆಲಿಸಿದ ಎಸ್ಪಿ ಡಾ. ಭೀಮಾಶಂಕರ ಗುಳೇದ ಪರಿಹಾರ ಕಲ್ಪಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಇನ್ಸಪೇಕ್ಟರ್ ಗಳಾದ ಮಹಾದೇವ ಎಸ್.ಎಂ. ಬಿ.ಆರ್. ಗಡ್ಡೇಕರ್, ಪೊಲೀಸ್ ಸಿಬ್ವಂದಿಗಳಾದ ಶ್ರೀಶೈಲ್, ರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


