ಪರಿಷತ್ ಸ್ಥಾನದಿಂದ ಮಂತ್ರಿ ಪಧವಿಯವರೆಗೆ ಸಾಹುಕಾರ್ ಜರ್ನಿ….!
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಮನೆತನಗಳಲ್ಲಿ ಒಂದಾದ ಜಾರಕಿಹೊಳಿ ಕುಟುಂಬ ಕೂಡಾ ಒಂದು. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲಿ, ಅಲ್ಲಿ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಇದ್ದೇ ಇರುತ್ತಾರೆ. ಹಾಗೆಯೇ ಇಡೀ ಕುಟುಂಬವೇ ರಾಜಕಾರಣವನ್ನು ಗರಡಿ ಮನೆಯಾಗಿ ಮಾಡಿಕೊಂಡಿದ್ದು ಸಧ್ಯ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಸಾಹುಕಾರ್ ಮನೆತನದ ಸತೀಶ್ ಜಾರಕಿಹೊಳಿ ಸಚಿವರಾಗಿ ಪ್ರಮಾಣವಚನ ಪಡೆದಿದ್ದು ಮತ್ತೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದಾರೆ.
ಬೆಳಗಾವಿ ಜಿಲ್ಲಾ ರಾಜಕಾರಣದ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾದ ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಅವರನ್ನು ಮೊದಲ ಸುತ್ತಿನಲ್ಲೇ ಮಂತ್ರಿ ಮಾಡುವ ಮೂಲಕ ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಮಣೆ ಹಾಕಿದೆ.
ಮೂಢನಂಬಿಕೆ ವಿರುದ್ಧ ಸದಾಕಾಲವೂ ಒಂದಿಲ್ಲೊಂದು ಹೋರಾಟ ನಡೆಸುವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅಷ್ಟೇ ಪ್ರಭಾವನ್ನು ಹೊಂದಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಇವರು ನಂತರ ಯಮಕನಮರಡಿ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಧ್ಯ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವಸ್ಥಾನ ಪಡೆದಿದ್ದಾರೆ.
ಬೆಳಗಾವಿ ರಾಜಕಾರಣದ ಮಾಸ್ಟರ್ ಮೈಂಡ್ : ಇಡೀ ರಾಜ್ಯದಲ್ಲೇ ಬೆಳಗಾವಿ ಜಿಲ್ಲಾ ರಾಜಕಾರಣದ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತದೆ. ಇಲ್ಲಿನ ಹೊಂದಾಣಿಕೆ ರಾಜಕಾರಣದ ಪಕ್ಷ ಹಾಗೂ ಸಿದ್ದಾಂತ ಹೊರತಾಗಿ ನಡೆಯುತ್ತದೆ. ಆದರೆ ಸತೀಶ್ ಜಾರಕಿಹೊಳಿ ಮಾತ್ರ ತಮ್ಮ ಸಿದ್ಧಾಂತದ ರಾಜಿ ಮಾಡಿಕೊಳ್ಳದೆ ಜನರನ್ನು ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ತಮ್ಮ ಗಟ್ಟಿ ನಾಯಕತ್ವ ಪ್ರದರ್ಶಿಸುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದು ವಿಶೇಷ.
ಪರಿಷತ್ ಸದಸ್ಯರಿಂದ ಸಚಿವ ಸ್ಥಾನದ ವರೆಗೆ : ಪ್ರಮುಖವಾಗಿ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು ಪರಿಷತ್ ಸದಸ್ಯರಾಗಿ. 1998ರಲ್ಲಿ ಸಕ್ರೀಯ ರಾಜಕಾರಣಕ್ಕೆ ಬಂದ ಇವರು, ಸಕ್ಕರೆ ಉದ್ಯಮದಲ್ಲಿ ಯಶಸ್ಸು ಕಂಡರು. 1998 ರಿಂದ 2008ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಧರಂಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸದ್ದ ಅನುಭವ ಇವರಿಗಿದೆ.
ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಮಂತ್ರಿ ಪಕ್ಕಾ : ಕಳೆದ ಹದಿನೈದು ವರ್ಷಗಳಿಗಿಂತ ಹೆಚ್ಚಿನ ಅವಧಿ ಗಮನಿಸಿದರೆ ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಮಂತ್ರಿ ಇರುವುದು ಪಕ್ಕಾ. ಶಾಸಕರಾದ ಬಾಲಚಂದ್ರ ಜಾರಿಹೊಳಿ, ರಮೇಶ್ ಜಾರಕಿಹೊಳಿ ಇಬ್ಬರು ಸಧ್ಯ ಬಿಜೆಪಿಯಲ್ಲಿದ್ದು ಈ ಹಿಂದೆ ಸರ್ಕಾರದಲ್ಲಿ ಮಂತ್ರಿ ಆಗಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಇವರ ಮನೆತನದ ಶಾಸಕರಾಗಿದ್ದು ಸರ್ಕಾರದಲ್ಲಿ ಮಂತ್ರಿ ಭಾಗ್ಯ ಕಾಯಂ ಎಂಬಂತಾಗಿದೆ.
****************
ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಸತೀಶ್ ಜಾರಕಿಹೊಳಿ
2004 – ಧರಮ್ ಸಿಂಗ್ ಸರ್ಕಾರ – ಜವಳಿ ( ಸ್ವತಂತ್ರ ಖಾತೆ )
2013 – ಸಿದ್ದರಾಮಯ್ಯ ಸರ್ಕಾರ – ಅಬಕಾರಿ ಖಾತೆ
2018 – ಕುಮಾರಸ್ವಾಮಿ ಸರ್ಕಾರ – ಅರಣ್ಯ & ಪರಿಸರ ಖಾತೆ
2023 – ಸಿದ್ದರಾಮಯ್ಯ ಸರ್ಕಾರ – ಪ್ರಮಾಣವಚನ ಸ್ವೀಕಾರ
******************


