Select Page

Advertisement

Video :ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ನಾಟಕವಾಡಿದ್ದ : ಸವದಿ ವಿರುದ್ಧ ಗುಡುಗಿದ ಕುಮಠಳ್ಳಿ

Video :ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ನಾಟಕವಾಡಿದ್ದ : ಸವದಿ ವಿರುದ್ಧ ಗುಡುಗಿದ ಕುಮಠಳ್ಳಿ

ಅಥಣಿ : ತಮ್ಮ ಸೌಮ್ಯ ಸ್ವಭಾವದಿಂದ ಮಹೇಶ್ ಕುಮಠಳ್ಳಿ ಎಲ್ಲರ ಗಮನ ಸೆಳೆಯುತ್ತಿದ್ದಿದ್ದು ಈಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಲಕ್ಷ್ಮಣ ಸವದಿಗೆ ಪಕ್ಷದ ಮೇಲೆ ಬದ್ಧತೆ ಇದೆ ಎಂದು ಭಾವಿಸಿದ್ದೆ ಆದರೆ ಡಿಸಿಎಂ ಅಧಿಕಾರಕ್ಕಾಗಿ ನಾಟಕ ಮಾಡಿದ ವ್ಯಕ್ತಿ ಆತ ಎಂದು ಗುಡುಗಿದರು.

ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು 17 ಜನ ಶಾಸಕರೊಂದಿಗೆ  ಬಿಜೆಪಿ ಪಕ್ಷವನ್ನ  ಸೇರ್ಪಡೆಗೊಳ್ಳುವಾಗ  50 ಕೋಟಿ ರೂಪಾಯಿ  ಪಡೆದುಕೊಂಡಿದ್ದೇನೆ ಎಂದು  ನನ್ನ ಆತ್ಮೀಯ ಸ್ನೇಹಿತ  ಸತ್ಯಪ್ಪ ಬಾಗೇಣ್ಣನವರ ಮುಂದೆ ಲಕ್ಷ್ಮಣ ಸವದಿ  ಅವರು ಆರೋಪ ಮಾಡಿದ್ದಾರೆ. ಇದಕ್ಕೆ ಅವರಲ್ಲಿ ಸಾಕ್ಷಿ ಇದ್ದರೆ ಅವರ ತಾಯಿಯ ಮೇಲೆ ಆಣೆ ಮಾಡಿ ಹೇಳಲಿ, ಇಲ್ಲವೇ ಅಥಣಿಯ ಸಿದ್ದೇಶ್ವರ ದೇವಸ್ಥಾನಕ್ಕೆ  ಬರಲಿ, ನಾನು ಸಹ ಬರುತ್ತೇನೆ. ಅವರು ಸಾರ್ವಜನಿಕವಾಗಿ  ಅವರು ಸಿದ್ದೇಶ್ವರ ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲಿ, ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಸವದಿ  ಅವರಿಗೆ ಸವಾಲು ಎಸೆದರು.

ನಾನು ಇಲ್ಲಿಯವರೆಗೆ ಅನೇಕ ಅವಮಾನಗಳಾದರೂ ಸಹಿಸಿಕೊಂಡಿದ್ದೆ, ಇನ್ನು ಮೇಲೆ ನಾನು ಸಹಿಸಿಕೊಳ್ಳುವುದಿಲ್ಲ. ಅವರಿಂದ ನನಗೆ ಯಾವುದೇ ಉಪಕಾರವಾಗಿಲ್ಲ. ನನ್ನಿಂದಲೇ ಅವರಿಗೆ ಅನೇಕ ಉಪಕಾರವಾಗಿದೆ, ಇನ್ನು ಮುಂದೆ ನಮ್ಮ ಅಭಿಮಾನಿಗಳಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾದರೂ ಸಹಿಸುವುದಿಲ್ಲ. ಅಥಣಿ ತಾಲೂಕಿನ ಅನೇಕ ಪಿಕೆಪಿಎಸ್‌ಗಳಲ್ಲಿ  ನಮ್ಮ ರೈತರಿಗೆ  ಸಾಲ ಸೌಲಭ್ಯಗಳು ಸಿಗದೇ ಹೋದರೆ  ಅಂತಹ ಪಿಕೆಪಿಎಸ್ ಗಳನ್ನು ಬೀಗ ಜಡಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಸಕ ಮಹೇಶ ಕುಮಟಳ್ಳಿ ಗುಡುಗಿದರು.

ನಾನು ಶಾಸಕನಾದ ಬಳಿಕ ಕಳೆದ 5 ವರ್ಷಗಳಲ್ಲಿ ಅಥಣಿ ಮತ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಎಲ್ಲ ಸಮುದಾಯಗಳಿಗೆ ವಿಶೇಷ ಅನುದಾನಗಳಲ್ಲಿ ಅನೇಕ ಯೋಜನೆಗಳನ್ನು ನೀಡಿದ್ದೇನೆ. ಪ್ರಮುಖವಾಗಿ ಅಮಾಜೇಶ್ವರಿ ಯಾತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ  ರಮೇಶಅಣ್ಣಾ  ಜಾರಕಿಹೊಳಿ  ಅವರ ಪಾತ್ರ ಬಹಳ ಮುಖ್ಯವಾಗಿದೆ.

ನನ್ನ ಆಡಳಿತದಲ್ಲಿ ಅವರು ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಅಥಣಿ ಮತಕ್ಷೇತ್ರದಲ್ಲಿ  ಯಾವುದೇ ಅಧಿಕಾರಿಗಳ ವರ್ಗಾವಣೆಯಲ್ಲಿ  ನಾನು ಮತ್ತು ರಮೇಶಣ್ಣ ಯಾವುದೇ ರಾಜಕೀಯ ಮಾಡಿಲ್ಲ. ಲಕ್ಷ್ಮಣ ಸವದಿ  ಮಾತ್ರ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ನಾನು  ಈ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ, ಎಲ್ಲವನ್ನು ಮೌನವಾಗಿಯೇ ಸ್ವೀಕರಿಸಿದ್ದೇವೆ. ಆದರೂ ಕೂಡ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ನಾನು ಇನ್ನು ಮುಂದೆ ಸಹಿಸುವುದಿಲ್ಲ.

ನನ್ನ ರಾಜಕೀಯ ಜೀವನದಲ್ಲಿಯೇ ಎಂದಿಗೂ ಯಾರಿಗೂ ನೋವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ, ನನ್ನ ಮುಗ್ಧ ಸ್ವಭಾವವನ್ನ  ದುರುಪಯೋಗಪಡಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡಿದರೆ  ಸಮಯ ಬಂದಾಗ  ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಸವದಿ ವಿರುದ್ಧ ಕುಮಟಳ್ಳಿ  ಅಸಮಾಧಾನ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!