ಅಥಣಿ : ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸು. 30 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಸಪ್ಪ ಚನ್ನಣ್ಣವರ, ಈರಪ್ಪ ಚನ್ನಣ್ಣನವರ, ಶಾನವ್ವ ಡಾಬೋಳಿ, ಗುರುಬಸು ತೇವರಮನಿ, ಚನಗೌಡ ರಾಚಗೌಡರ, ಅಪ್ಪಾಸಾಹೇಬ ಗಿರಿಮಲ್ಲನವರ, ರಾಮಣ್ಣ ಗಿರಿಮಲ್ಲನವರ ಇನ್ನೂ 10ಕ್ಕೂ ಹೆಚ್ಚು ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.
ರಾತ್ರಿ ವೇಳೆ ನೆರೆಯ ಜಮೀನಿನ ರೈತ ಕಬ್ಬು ಸಾಗಾಣಿಕೆ ಮಾಡಿದ ನಂತರ ರವದೆ ಸುಡುತ್ತಿದ್ದ ವೇಳೆ ಬೆಂಕಿಯ ಕೆನ್ನಾಲಿಗೆ ಗಾಳಿಯ ರಬಸಕ್ಕೆ ಸಮೀಪದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಸುತ್ತಮುತ್ತಲಿನ ಜಮೀನುಗಳಿಗೂ ಹರಡಿದೆ. ವಿಷಯ ತಿಳಿದ ತಕ್ಷಣ ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಅಗ್ನಿಶಾಮಕ ವಾಹನದ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗಿ ಬೆಂಕಿ ನಂದಿಸುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.
ಇದರಿಂದಾಗಿ ಬೆಂಕಿ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸಿ ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿಯಾಗಿದೆ. ಬಳಿಕ ರಾಯಬಾಗ, ಉಗಾರ ಸೇರಿದಂತೆ ವಿವಿಧ ಭಾಗಗಳಿಂದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಸುದೀರ್ಘ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಈ ಅಗ್ನಿ ಅವಘಡದಿಂದ ಸುಮಾರು 30 ಎಕರೆ ಪ್ರದೇಶದ ಕಬ್ಬು ಬೆಳೆ ಸುಟ್ಟು ಹೋಗಿದ್ದು, ಅಂದಾಜು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಬ್ಬಿನ ಬೆಳೆ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ನೆರೆಯ ನಿವಾಸಿಗಳಿಗೂ ಆತಂಕ : ಬೆಂಕಿಯ ಕೆನ್ನಾಲಿಗೆ ಸಮೀಪದ ಮನೆಗಳಿಗೂ ವ್ಯಾಪಿಸುವ ಆತಂಕ ಎದುರಾಗಿತ್ತು. ಇದನ್ನು ಅರಿತ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಮನೆಗಳ ಸುತ್ತಮುತ್ತ ನೀರು ಸಿಂಪಡಿಸುವ ಮೂಲಕ ಬೆಂಕಿ ಮನೆಗಳಿಗೆ ಹರಡದಂತೆ ತಡೆದು ಮನೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಗಾಲದ ರೈತರು ಪರಿಹಾರಕ್ಕೆ ಆಗ್ರಹ : ಕಷ್ಟಪಟ್ಟು ಬೆಳೆದಿದ್ದ ಕಬ್ಬು ಕಣ್ಣೆದುರೇ ಬೆಂಕಿಗೆ ಆಹುತಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಸಮೀಕ್ಷೆ ನಡೆಸಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ಘಟನೆಯು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





