ಬೆಳಗಾವಿ : ಜಿಲ್ಲಾ ರಾಜಕಾರಣ ಹಾಗೂ ಅಧಿಕಾರದಿಂದ ಪದೇ, ಪದೇ ಕುರುಬ ಸಮುದಾಯವನ್ನು ದೂರ ಇಡಲಾಗುತ್ತಿದೆ, ಹಾಗೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುತ್ತಿರುವ ರೀತಿಯ ವಿರುದ್ಧ ಕುರುಬ ಸಮುದಾಯ ಆಕ್ರೋಶಗೊಂಡಿದ್ದು, ಇದು ಎಲ್ಲಿ ಹೋಗಿ ನಿಲ್ಲುತ್ತದೆ ಎಂಬ ಅಂದಾಜು ಸಿಗದಷ್ಟು ದೂರ ಸಾಗಿದೆ.

ಹೌದು ಬೆಳಗಾವಿ ಜಿಲ್ಲೆಗೆ ಹೋಲಿಸಿದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಿಂದಲೂ ಕುರುಬ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಿಲ್ಲ ಎಂಬ ಆರೋಪ ಇದೆ. ಈ ಮಧ್ಯೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರ ನೇಮಕ ವಿಚಾರವಾಗಿ ಕೈಗೊಂಡ ನಿರ್ಧಾರಗಳ ಕುರಿತು ಕುರುಬ ಸಮುದಾಯದ ಅಸಮಾಧಾನಗೊಂಡಿದೆ.

ಈ ಎಲ್ಲಾ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕುರುಬ ಸಮುದಾಯದ ಸಭೆ ನಡೆಯುತ್ತಿದ್ದು ಮುಂದಿನ ಹೋರಾಟ ಹಾಗೂ ಸಂಘಟನೆ ಕುರಿತು ಚರ್ಚೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ತಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಹೋರಾಟಕ್ಕೆ ಇಳಿಯುವ ಸಾಧ್ಯತೆಯೂ ದಟ್ಟವಾಗಿದೆ.

ಬೆಳಗಾವಿ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಸಧ್ಯ ಜಿಲ್ಲಾ ರಾಜಕಾರಣದಲ್ಲಿ ನಡೆಯುತ್ತಿರುವ ಏರಿಳಿತದ ನಡುವೆ ಕುರುಬ ಸಮುದಾಯದ ಸಿಟ್ಟು ಯಾರಿಗೆ ತೊಂದರೆ ನೀಡುತ್ತದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.

*********
ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ…?

ಮುಂಬರುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕುರುಬ ಸಮುದಾಯದಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಸುಪ್ರೀಂ ನಾಯಕರ ಜೊತೆ ಮಾತನಾಡಿ ಅವರ ಒಪ್ಪಿಗೆ ಸಿಕ್ಕರೆ ಪ್ರತಿಭಟನೆ ನಡೆಯಬಹುದು.

*************