ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಕನೂರು ಗ್ರಾಮದ ಕರಿಸಿದ್ದೇಶ್ವರ ದೇಗುಲದ ಆನೆ ಧ್ರುವರಾಜಾ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ಧ್ರುವರಾಜಾ ಎಂದೇ ಖ್ಯಾತಿ ಪಡೆದಿದ್ದ ಈ ಆನೆ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ಕಳೆದ 25 ವರ್ಷಗಳ ಹಿಂದೆ ಕರಿಸಿದ್ದೇಶ್ವರ ಮಠಕ್ಕೆ ತರಲಾಗಿದ್ದ ಧ್ರುವರಾಜಾ, ಅಂದಿನಿಂದಲೇ ಭಕ್ತರು ಹಾಗೂ ಸ್ಥಳೀಯರೊಂದಿಗೆ ವಿಶೇಷ ಪ್ರೀತಿ ಮತ್ತು ವಾತ್ಸಲ್ಯದ ಬಾಂಧವ್ಯ ಬೆಳೆಸಿಕೊಂಡಿತ್ತು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವರಾಜಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದೆ.

ಧ್ರುವರಾಜಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಲಕನೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ತನ್ನ ಪ್ರೀತಿ ಮತ್ತು ಮಮತೆಯಿಂದ ಎಲ್ಲರ ಮನಗೆದ್ದಿದ್ದ ಆನೆಯ ಅಗಲಿಕೆಯಿಂದ ಮಾವುತ, ಸ್ಥಳೀಯರು, ಭಕ್ತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.