ಬೆಳಗಾವಿ : ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ನಡೆಸುತ್ತಿರುವ ಹೋರಾಟದ ಭಾಗವಾಗಿ ನಾಳೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಮುತ್ತಿಗೆ ಹಾಕುವ ಬದಲು ಜೈಲು ಭರೋ ಚಳವಳಿ ನಡೆಸಲು ರೈತ ಮುಖಂಡರು ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸ್ ಇಲಾಖೆ, ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದೆ.
ಈ ಕುರಿತು ಬೆಳಗಾವಿ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರು ಮಾಹಿತಿ ನೀಡಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಾಯ್ದೆಯ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಐದು ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗುಂಪುಗೂಡುವಂತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ನಾಳೆ ನಡೆಯಲಿರುವ ರೈತರ ಜೈಲು ಭರೋ ಚಳವಳಿಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ನಗರದಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ನಾಳಿನ ರೈತರ ಜೈಲು ಭರೋ ಚಳವಳಿ ಇದೀಗ ತೀವ್ರ ಕುತೂಹಲ ಮೂಡಿಸಿದೆ.





