ಬೆಳಗಾವಿ : ಕಬ್ಬು ಬೆಲೆ ಏರಿಕೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದ್ದು ಬುಧವಾರ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸಲಾಯಿತು. ಆದರೆ ಬೆಲೆ ಕುರಿತು ಇಬ್ಬರ ನಡುವೆ ಒಪ್ಪಂದ ಬರಲು ಸಾಧ್ಯವಾಗಿಲ್ಲ. ಹಾಗಾಗಿ ನಾಳೆ‌ ಮತ್ತೊಂದು ಸುತ್ತಿನ ಸಭೆ ಕರೆದು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಭೆ ನಂತರ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜೇರಿ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರತಿ ಟನ್ ಕಬ್ಬಿಗೆ 4 ಸಾವಿರ ಮೇಲ್ಪಟ್ಟು ಬಿಲ್ ಕೊಡಬೇಕೆಂದು ಮನವಿ ಮಾಡಿದ್ದೇವೆ. ಆದರೆ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿದ್ದು ಸರ್ಕಾರ ಮಾತುಕತೆ ಮೂಲಕ‌ ನಿರ್ಧಾರ ಪ್ರಕಟಿಸಲಿ ಎಂದರು.

ಮುಖ್ಯಮಂತ್ರಿಗಳ ಸಭೆಯಲ್ಲಿ ಕಾರ್ಖಾನೆಗಳು 3500 ಕೊಡಲು ಒಪ್ಪಿಗೆ ಸೂಚಿಸಿವೆ. ಆದರೆ ನಮ್ಮ ಬೇಡಿಕೆ 4 ಸಾವಿರ ರೂ. ಗಿಂತ ಹೆಚ್ಚಿಗೆ ಇದೆ. ಮತ್ತೊಂದು ಸುತ್ತಿನ ಮಾತುಕತೆ ಮೂಲಕ ಆದಷ್ಟು ಬೇಗ ನಿರ್ಧಾರ ಪ್ರಕಟಿಸಿದರೆ ರೈತರು ಸೇರಿ ಹೋರಾಟ ಕೈಬಿಡುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.