ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚನ್ನಮ್ಮಾಜಿಯವರ ಪುತ್ಥಳಿಯ ಬಲಗೈ ತುಂಡಾಗಿ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ರಾಣಿ ಚನ್ನಮ್ಮಾಜಿಯವರ ಖಡ್ಗ ಹಿಡಿದಿದ್ದ ಬಲಗೈ ಮುರಿದು ಬಿದ್ದಿರುವುದು ಚನ್ನಮ್ಮಾಜಿಯ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿತ್ತೂರಿಗೆ ಭೇಟಿ ನೀಡಿ ಇದೇ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದರು. ಆದರೆ, ಅಷ್ಟರಲ್ಲೇ ಪುತ್ಥಳಿಯ ಕೈ ಮುರಿದು ಬಿದ್ದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಉತ್ಸವದ ಹಿನ್ನೆಲೆಯಲ್ಲಿ ತಕ್ಷಣವೇ ಪುತ್ಥಳಿಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ಉತ್ಸವ ಮುಗಿದ ಬಳಿಕ ಅದೇ ಸ್ಥಳದಲ್ಲಿ ಭವ್ಯವಾದ ನೂತನ ಪುತ್ಥಳಿಯನ್ನು ನಿರ್ಮಿಸಬೇಕು. ಜೊತೆಗೆ, ಘಟನೆಗೆ ನಿಖರ ಕಾರಣ ಪತ್ತೆಹಚ್ಚಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




