ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸುವ ಸುದಿನ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನರ ಸಂಭ್ರಮವೇ ಜಂಬೂಸವಾರಿಯಾಗಿತ್ತು. ಭಾನುವಾರ ರಜೆಯ ದಿನವಾದ್ದರಿಂದ ಜನಸಾಗರ. ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಚಾಮುಂಡಿ ಬೆಟ್ಟದಲ್ಲಿ ದೈವಿಕ ಹವಾಮಾನ ಕಳೆಗಟ್ಟಿತು. ಸಿಎಂ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಕಾಲಿಡುತ್ತಿದ್ದಂತೆ ಭಕ್ತಿ ಪರವಶರಾದರು. ಮುಗಿಲೆತ್ತರದ ಚಾಮುಂಡಿ ತಾಯಿಯ ಗೋಪುರಕ್ಕೆ ಪುಟ್ಟ ಮಗುವಿನಂತೆ ನಮಸ್ಕರಿಸಿದರು.

ನಂತರ ದಸರಾ ಉದ್ಘಾಟಕರಾದ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಪಾದಗಳಿಗೆ ಎರಗಿ, ಅವರ ಜೊತೆಗೂಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಸ್ಥಾನದ ಹೊಸ್ತಿಲಿಗೆ ಹಣೆಯಿಟ್ಟು, ಮನಬಾಗಿ ತಾಯಿಯ ಮಂತ್ರ ಜಪಿಸಿ, ಭಕ್ತಿ ಪೂರ್ವಕವಾಗಿ ನಮಿಸಿದರು.

ತಾಯಿ ಚಾಮುಂಡಿಯ ಸನ್ನಿಧಿಯಲ್ಲಿ ಪತ್ನಿ ಉಷಾ ಅವರು ಹಾಗೂ ಗವಿಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಜ್ಯಕ್ಕೆ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ, ದೇವಸ್ಥಾನದ ವತಿಯಿಂದ ನೀಡಿದ ಗೌರವವನ್ನು ಸ್ವೀಕಾರ ಮಾಡಿದರು. ಪತ್ನಿ ಉಷಾ ಅವರಿಗೆ ಹಾರ ಹಾಕಿ, ಎದುರಿಗಿದ್ದ ತಾಯಿ ಚಾಮುಂಡಿಗೆ ಪತ್ನಿ ಸಮೇತ ನಮಸ್ಕರಿಸಿದರು.

ಬಳಿಕ ಉದ್ಘಾಟನಾ ವೇದಿಕೆಗೆ ಬಂದು ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದ ರಾಜ್ಯದ ನಾನಾ ಭಾಗಗಳ ಸರ್ವಧರ್ಮಗಳ ಗುರುಗಳಿಗೆ ವೇದಿಕೆ ಮೇಲಿಂದಲೇ ಗೌರವಪೂರ್ವಕವಾಗಿ ನಮಿಸಿದರು.

ಉದ್ಘಾಟನಾ ವೇದಿಕೆಯಲ್ಲಿದ್ದ ಚಾಮುಂಡೇಶ್ವರಿ ತಾಯಿ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ನಾಡಹಬ್ಬಕ್ಕೆ ಅಡ್ಡಿ ಆತಂಕಗಳು ಬಾರದಿರಲಿ, ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಉದ್ಘಾಟನೆಯ ನಂತರ ಗವಿಸಿದ್ದೇಶ್ವರ ಶ್ರೀಗಳನ್ನು ಸನ್ಮಾನಿಸಲು ಸಿಎಂ ಅವರು ಮುಂದಾದಾಗ, ಶ್ರೀಗಳು ಹಾರ ಹಾಗೂ ಮೈಸೂರು ಪೇಟವನನ್ನು ಸಿಎಂಗೇ ತೊಡಿಸಿ ಆಶೀರ್ವದಿಸಿದರು. ಗವಿಸಿದ್ದೇಶ್ವರ ಶ್ರೀಗಳ ಭಾಷಣವನ್ನು ಸಿಎಂ ಅವರು ತದೇಕಚಿತ್ತದಿಂದ ಆಲಿಸಿದರು. ಭಾಷಣದ ಮಧ್ಯೆ ಶ್ರೀಗಳು, ದಸರಾ ಅನ್ನೋದು ಭೂತ, ಭವಿಷ್ಯ, ವರ್ತಮಾನದ ತ್ರಿವೇಣಿ ಸಂಗಮದ ಸಂಕೇತ. ಮೈಸೂರು, ಚಾಮುಂಡೇಶ್ವರಿ ಕ್ಷೇತ್ರ ಅನ್ನೋದು ಟವರ್ ಆಫ್ ಪವರ್ ಇದ್ದಂತೆ ಅಂದಾಗ ಮುಖ್ಯಮಂತ್ರಿಗಳು ಚಪ್ಪಾಳೆ ತಟ್ಟಿ ತಲೆದೂಗಿದರು.

ತಾವು ಭಾಷಣ ಮಾಡಲು ನಿಂತಾಗ, “ಹಬ್ಬಗಳು ಇದ್ದ ಕಡೆ ಸಂಸ್ಕೃತಿ ಇರುತ್ತದೆ,‌ ಸಂಸ್ಕೃತಿ ಇದ್ದ ಕಡೆ ಸರಸ್ವತಿ ಇರುತ್ತಾಳೆ. ಸರಸ್ವತಿ ಇದ್ದ ಕಡೆ ಕಲೆ ಇರುತ್ತದೆ, ಕಲೆ ಇದ್ದ ಕಡೆ ಬೆಲೆ ಇರುತ್ತದೆ. ಇದಕ್ಕೆ ನಾಡಹಬ್ಬ ದಸರವೇ ಸಾಕ್ಷಿ” ಎಂದು ದಸರಾ ವೈಭವವನ್ನು, ಕಲಾ ಮೆರುಗನ್ನು ಸಿಎಂ ಪರಿಚಯಿಸಿದರು. ಆಧುನಿಕತೆ-ಸಂಪ್ರದಾಯಗಳ ಸಮ್ಮಿಶ್ರಣವಾಗಿರುವ ದಸರೆಯ ವೈಭವದ ಸಿಹಿಯನ್ನು ಸಿಎಂ ಸವಿದರು.

ಕುಪ್ಪಣ್ಣ ಪಾರ್ಕಿನಲ್ಲಿ ಹೂಗಳಿಂದ ನಿರ್ಮಿಸಿದ್ದ ‘ಪುಷ್ಪ ವಿಧಾನಸೌಧ’ವನ್ನು ಅತ್ಯಂತ ಕುತೂಹಲದಿಂದ‌ ವೀಕ್ಷಿಸಿದರು. ಸಂವಿಧಾನ ಪುಸ್ತಕ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಅಂಬಾವಿಲಾಸ ಅರಮನೆಗೆ ಭೇಟಿ ನೀಡಿ ಪ್ರೇಕ್ಷಕರ ಗ್ಯಾಲರಿಯ ಸೌಂದರ್ಯವನ್ನು ಕಣ್ ತುಂಬಿಕೊಂಡರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸಜ್ಜಾಗಿದ್ದ ಕುಸ್ತಿ ಕಣಕ್ಕೆ ನಮಿಸಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿಯವರು. ಕುಸ್ತಿ ಪಟುಗಳ ಜೋಡಿ ಕಟ್ಟಿ ಕುಸ್ತಿ ಪಂದ್ಯವನ್ನು ವೀಕ್ಷಿಸಿದರು. ಪ್ರೊ.ನಾಗಮಣಿ ಶ್ರೀನಾಥ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ನಂತರ ಅರಮನೆ ಮುಂಭಾಗದಲ್ಲಿರುವ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್ ಅನ್ನು ಆಲಿಸಿದರು.

“ಮುಂದಿನ ವರ್ಷದಿಂದ ಅರಮನೆ ಆವರಣದಲ್ಲಿ ಪ್ರದರ್ಶನ ನೀಡುವಂತೆ ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.