ಬೆಳಗಾವಿ : ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೊತ್ತುವಳಿ ಮಂಡಿಸಬೇಕು ಎಂದು ಬೆಳಗಾವಿ ಜೆಲ್ಲೆಯ ಅನೇಕ ಸಂಘಟನೆಗಳು ಕಳೆದ ಕೆಲ ತಿಂಗಳಿನಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದವು.
ನಿಖರವಾಗಿ “ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ” ಎಂದು ಬೆಳಗಾವಿ ಮಹಾನಗರ ಪಾಲಿಕೆ ನಿರ್ಣಯ ಕೈಗೋಂಡು ಠರಾವು ಪಾಸ್ ಮಾಡುವಂತೆ ಆಗ್ರಹಿಸಲಾಗಿತ್ತು. ಆದರೆ ಮಹಾನಗರ ಪಾಲಿಕೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಚೆಂಡನ್ನು ಸರಕಾರದ ಅಂಗಳಕ್ಕೆ ನೂಕಿತ್ತು.
ಈ ನಡುವೆ ಸರಕಾರ ಹಾಗೂ ಬೆಳಗಾವಿ ಪಾಲಿಕೆ ಮಧ್ಯೆ ಅನೇಕ ಪತ್ರ ವ್ಯವಹಾರ ನಡೆದಿದ್ದವು. ಈ ಮಧ್ಯದಲ್ಲೇ ಅಡವಿ ದೆವ್ವದಂತೆ ಎದ್ದು ಬಂದಿದ್ದೇ ಮಹಾಜನ ವರದಿ. 1988ರ ಮಾರ್ಚ್ 23ರಂದು ಕರ್ನಾಟಕ ವಿಧಾನಸಭೆಯಲ್ಲಿ ಮಹಾಜನ ವರದಿಯೇ ಅಂತಿಮ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನೇ ಉಲ್ಲೇಖಿಸಿದ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಮಹಾನಗರ ಪಾಲಿಕೆಗೆ ಪತ್ರ ಬರೆದಿತ್ತು.
ಈಗಾಗಲೇ ರಾಜ್ಯ ಮಹಾಜನ ವರದಿ ಒಪ್ಪಿಯಾಗಿದೆ. ಇದರ ಅನುಷ್ಠಾನಕ್ಕಾಗಿ ದಶಕಗಳಿಂದ ಕಾನೂನು ಹೋರಾಟ ಮುಂದುವರಿಸಿಕೊಂಡು ಬಂದಿದೆ. ಬೆಳಗಾವಿ ಮಹಾನಗರ ಪಾಲಿಕೆ ಮಹಾಜನ ವರದಿ ಅನುಷ್ಠಾನದ ಕುರಿತು ಸರಕಾರ ಕೈಗೊಂಡ ನಿರ್ಣಯದ ಪರವಾಗಿ ನಾವು ಇದ್ದೇವೆ ಎಂದು ಈಗ ಠರಾವು ಪಾಸ್ ಮಾಡಿದೆ.
ಅಂದು ಎಂಇಎಸ್ ಆಡಿದ್ದ ಆಟವೇನು..? ಈ ಹಿಂದೆ ಎಂಇಎಸ್ ಬೆಳಗಾವಿ ಕಾರ್ಪೋರೇಷನ್ ನಲ್ಲಿ 2005 ರಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಠರಾವು ಪಾಸ್ ಮಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಹಾಜನ ವರದಿ ಅನ್ವಯ ಬೆಳಗಾವಿ ನಗರ ಯಾವಾಗ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ ಎಂದು ಗೊತ್ತಾಯಿತು ಆಗಲೇ ಠರಾವು ನಾಟಕ ಮಾಡಿದ್ದರು.
ಸಧ್ಯ ಮಹಾಜನ ವರದಿ ಕೇವಲ ಬೆಳಗಾವಿಗೆ ಸೀಮಿತವಲ್ಲ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ಗಡಿ ಸಮಸ್ಯೆ ಕುರಿತು ಇರುವ ವರದಿ. ಇದರ ಅನುಷ್ಠಾನಕ್ಕೆ ಈವರೆಗೆ ಯಾವುದೇ ಆಡಳಿತ ಪಕ್ಷಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಆದರೆ ಗಡಿ ಜಿಲ್ಲೆ ಬೆಳಗಾವಿ ಸಮಸ್ಯೆಯನ್ನು ಮಹಾಜನ ವರದಿಗೆ ಸೀಮಿತ ಮಾಡುತ್ತಿರುವುದು ವಿಪರ್ಯಾಸ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಘೋಷಣೆ ಆಗಲಿಲ್ಲ…!
ಸಧ್ಯ ಬೆಳಗಾವಿ ಮಹಾನಗರ ಪಾಲಿಕೆ ತೀಕ್ಷ್ಣ ಆಟ ಆಡಿದೆ. ಬೆಳಗಾವಿ ಗಡಿ ವಿಚಾರವಾಗಿ ಸರಕಾರ ಹೇಳಿದ್ದ ಮಹಾಜನ ವರದಿ ಆಟವನ್ನೇ ಮುಂದಿಟ್ಟುಕೊಂಡು ಅದನ್ನೇ ಪಾಸ್ ಮಾಡುವ ಮೂಲಕ ಕೈತೊಳೆದುಕೊಂಡಿದೆ. ಆದರೆ ಈವರೆಗೆ ಕೇಳಲಾಗಿದ್ದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಒಂದು ಸಾಲಿನ ಗೊತ್ತುವಳಿ ಕೊನೆಗೂ ಪಾಲಿಕೆ ಬಾಯಲ್ಲಿ ಬಂದಿಲ್ಲ.
ಮಹಾಜನ್ ವರದಿಗೆ ಜೈ ಅಂದಿದ್ದು ಬಿಟ್ಟರೆ ಬೇರೆ ಏನಿದೆ..?
ಮಹಾಜನ್ ವರದಿ ಅನುಷ್ಠಾನಕ್ಕೆ ನಮ್ಮ ಬೆಂಬಲ ಎಂದರೆ ಇದರಿಂದ ಏನೂ ಲಾಭ. ಕಾನೂನು ಹೋರಾಟದ ಸಂದರ್ಭದಲ್ಲಿ ಮುಂದೆ ತುಂಬಾ ಲಾಭ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ದಶಕಗಳಿಂದ ದೂಳು ಹಿಡಿದು ಬಿದ್ದಿರುವ ಮಹಾಜನ ವರದಿಗೆ ಬೆಳಗಾವಿ ಪಾಲಿಕೆ ನಿರ್ಣಯದಿಂದ ಏನು ಲಾಭವಾಗಲು ಸಾಧ್ಯ…?
ಸಂಭ್ರಮಾಚರಣೆ ಯಾಕೆ…? ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡ ಗೊತ್ತುವಳಿಯನ್ನೇ ದೊಡ್ಡ ಜಯ ಎಂಬಂತೆ ಕೆಲವರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆದರೆ ಇದು ಯಾವ ಜಯವೂ ಅಲ್ಲ ಎಂಬುದು ಅನೇಕರ ವಾದ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಒಂದು ಲೈನ್ ಹೇಳಿಕೆ ಪಾಲಿಕೆಯಿಂದ ಬಂದಿದ್ದರೆ ಅದಕ್ಕೆ ನಿಜವಾದ ಜಯ ಎಂದು ಹೇಳಬಹುದಿತ್ತು. ಆದರೆ ನಗರಾಭಿವೃದ್ಧಿ ಇಲಾಖೆ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಮಹಾಜನ್ ವರದಿ ಅನುಷ್ಠಾನ ಎಂಬ ಹೊಸ ನಾಟಕ ಆಡಿ ಹೋರಾಟಗಾರರ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಂತು ಸ್ಪಷ್ಟ.
ಮಹಾಜನ್ ವರದಿಯಿಂದ ಕರ್ನಾಟಕಕ್ಕೆ ಆಗುವ ಲಾಭ…?
ಮಹಾಜನ್ ವರದಿ ಅನುಷ್ಠಾನವಾದರೆ ಕರ್ನಾಟಕಕ್ಕೆ ಆಗುವ ಲಾಭ ಎಂದರೆ ಸೊಲ್ಲಾಪುರದ 65 ಹಳ್ಳಿ, ಅಕ್ಕಲಕೋಟೆ ತಾಲೂಕು, ಜತ್ತ ತಾಲೂಕಿನ 44 ಹಳ್ಳಿ, ಗಡಹಿಂಗ್ಲಜ ತಾಲೂಕಿನ 15 ಹಳ್ಳಿ ಹಾಗೂ ಕೇರಳದ ಕಾಸರಗೋಡು ಕರ್ನಾಟಕಕ್ಕೆ ಸೇರಲಿದೆ.
ಮಹಾಜನ್ ವರದಿ ಅನುಷ್ಠಾನದಿಂದ ರಾಜ್ಯಕ್ಕೆ ಆಗುವ ನಷ್ಟ ಎಂದರೆ….ಬೆಳಗಾವಿಯ 62 ಹಳ್ಳಿ, ಖಾನಾಪುರ ತಾಲೂಕು ಸೇರಿದಂತೆ 159 ಹಳ್ಳಿ, ಚಿಕ್ಕೋಡಿಯ 41, ಹುಕ್ಕೇರಿಯ 9 ಹಳ್ಳಿ, ರಕ್ಕಸಕೊಪ್ಪ ಜಲಾಶಯ ಮಹಾರಾಷ್ಟ್ರ ಪಾಲಾಗಲಿದೆ.
ಒಟ್ಟಿನಲ್ಲಿ ಕನ್ನಡ ಗೊತ್ತುವಳಿ ಎಂಬ ಬದನೆಕಾಯಿ ಹಾಗೂ ಸಂಭ್ರಮಾಚರಣೆ ಎಂಬ ನಾಟಕದ ಮಧ್ಯೆ ಬೆಳಗಾವಿ ಜನರಿಗೆ ಯಾವ ಲಾಭವೂ ಇಲ್ಲ. ಮೂಲಸೌಕರ್ಯಗಳ ಕೊರತೆಯಲ್ಲೇ ಜನ ಬದುಕು ಸಾಗಿಸುತ್ತಾ ಭಾಷೆ ವಿಚಾರವಾಗಿ ಮಾತನಾಡುವುದು ಬಿಟ್ಟರೆ ಅಭಿವೃದ್ಧಿ ಮಾತ್ರ ಶೂನ್ಯ.




