ಬೆಳಗಾವಿ : 2026ರ ಅಕ್ಟೋಬರ್ 1ರಿಂದ ನವದೆಹಲಿ–ಬೆಳಗಾವಿ ನಡುವೆ ಇಂಡಿಗೋ ವಿಮಾನ ಸಂಸ್ಥೆಯು ತನ್ನ ನಿತ್ಯದ ಸಂಚಾರವನ್ನು ಪುನರಾರಂಭಿಸಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂಡಿಗೋ ವಿಮಾನಯಾನ ಸಂಸ್ಥೆಯು ಈ ಮೊದಲು ಈ ಮಾರ್ಗದಲ್ಲಿ ನಿತ್ಯ ಸೇವೆ ಒದಗಿಸುತ್ತಿತ್ತು. ಆದರೆ ಕೆಲ ತಿಂಗಳುಗಳ ಹಿಂದಷ್ಟೇ ಸೇವೆಯನ್ನು ವಾರಕ್ಕೆ ಮೂರು ದಿನಗಳು ಮಾತ್ರ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಮಾತ್ರ ಸೀಮಿತಗೊಳಿಸಿತ್ತು.
ಇದರಿಂದ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ, ವೈದ್ಯರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿ, ಈ ಸೇವೆಯನ್ನು ನಿತ್ಯವೂ ಆರಂಭಿಸುವಂತೆ ಕೋರಿ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕೆ. ರಾಮಮೋಹನ ನಾಯ್ಡು ಅವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಇದರ ಜೊತೆಗೆ ಇಂಡಿಗೋ ಸಂಸ್ಥೆ ಅಧಿಕಾರಿಗಳಿಗೂ ಪತ್ರ ಬರೆದು ಮನವಿ ಮಾಡಲಾಗಿತ್ತು.
ನಮ್ಮ ಬೇಡಿಕೆಯಂತೆ ಇದೀಗ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ವಾರದ ಏಳೂ ದಿನಗಳ ಕಾಲ ವಿಮಾನ ಸಂಚಾರ ನಡೆಸಲಿದೆ. ನಿತ್ಯ ಬೆಳಗ್ಗೆ 6.15ಕ್ಕೆ ದೆಹಲಿಯಿಂದ ಹೊರಡುವ ವಿಮಾನ ಬೆಳಗ್ಗೆ 8.40ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಅದೇ ರೀತಿ ಬೆಳಗ್ಗೆ 9.10ಕ್ಕೆ ಬೆಳಗಾವಿಯಿಂದ ಹೊರಡುವ ವಿಮಾನ ಬೆಳಗ್ಗೆ 11.40ಕ್ಕೆ ದೆಹಲಿಗೆ ತಲುಪಲಿದೆ. ಈ ಸೇವೆಯನ್ನು ಪುನರಾರಂಭಿಸಿದ್ದಕ್ಕಾಗಿ ಕೇಂದ್ರ ವಿಮಾನಯಾನ ಸಚಿವರಿಗೆ ಹಾಗೂ ಇಂಡಿಗೋ ಸಂಸ್ಥೆ ಅಧಿಕಾರಿಗಳಿಗೆ ಅಭಿನಂದನೆಗಳು.
ಇದೇ ರೀತಿ, ಬೆಂಗಳೂರು-ಬೆಳಗಾವಿ ನಡುವೆ ಪ್ರಸ್ತುತ ವಾರದಲ್ಲಿ ನಾಲ್ಕು ದಿನಗಳ ಕಾಲ (ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರ) ಕಾರ್ಯನಿರ್ವಹಿಸುತ್ತಿದ್ದ ಬೆಳಗಿನ ವಿಮಾನ ಸೇವೆ ಸಹ ಅಕ್ಟೋಬರ್ 1 ರಿಂದ ವಾರದ ಏಳೂ ದಿನಗಳಿಗೆ ವಿಸ್ತರಣೆಯಾಗಲಿದೆ. ಅಲ್ಲದೆ, ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಇರುವ ಸಂಜೆಯ ವಿಮಾನ ಸೇವೆಯೂ ಮುಂದುವರಿಯಲಿದ್ದು, ಮುಂಬರುವ ದಿನಗಳಲ್ಲಿ ಸಂಜೆಯ ಸೇವೆಯನ್ನು ಪ್ರತಿದಿನ ಒದಗಿಸುವ ಬಗ್ಗೆ ಇಂಡಿಗೋ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.




