ಬೈಲಹೊಂಗಲ‌ : ಜಮೀನು ಪಾಲು-ವಾಟೆ ವಿಚಾರವಾಗಿ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ಮಾಜಿ ಸೈನಿಕನೊಬ್ಬರನ್ನು ಕೊಲೆ ಮಾಡಿ, ಮತ್ತೊಬ್ಬರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿತರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ 2023ರ ಜೂನ್ 4ರಂದು ಈ ಘಟನೆ ನಡೆದಿತ್ತು.

ತೋಟದ ಜಮೀನಿನಲ್ಲಿ ಆರೋಪಿತರು ಟ್ರ್ಯಾಕ್ಟರ್ ಮೂಲಕ ಗಳೆ ಹೊಡೆಯುತ್ತಿದ್ದಾಗ, ಜಮೀನು ಪಾಲು-ವಾಟೆ ಆಗುವವರೆಗೆ ಗಳೆ ಹೊಡೆಯಬೇಡಿ ಎಂದು ಕಸ್ತೂರೆವ್ವ ಖನಗಾಂವಿ, ಅವರ ಪತಿ ಸದಾಶಿವ ಖನಗಾಂವಿ ಹಾಗೂ ಮೈದುನ ಸುರೇಶ ಖನಗಾಂವಿ ಅವರು ಆಕ್ಷೇಪಿಸಿದ್ದರು. ಈ ವೇಳೆ ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಕುಡಗೋಲು, ಗುದ್ದಲಿ ಹಾಗೂ ಸಲಿಕೆಯಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಸುರೇಶ ಖನಗಾಂವಿ ಮೃತಪಟ್ಟಿದ್ದು, ಸದಾಶಿವ ಖನಗಾಂವಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಸ್.ಆರ್. ಗಣಾಚಾರಿ ಹಾಗೂ ಪಿ.ವಿ. ಸಾಲಿಮಠ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಆರ್.ಎ. ಬಾರಾವಲಿ ಅವರು ವಾದ ಮಂಡಿಸಿದ್ದು, ಮುಖ್ಯ ಪೇದೆ ಮೋಹನ ಮೊಕಾಶಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣದ ವಾದ-ವಿವಾದ ಆಲಿಸಿದ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಪಿ. ಗೌಡ ಅವರು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದರು. ಪ್ರಮುಖ ಆರೋಪಿ ಶಂಕ್ರಪ್ಪ ಮಲ್ಲಸರ್ಜ ಉರ್ಪ್ ಮಲ್ಲಪ್ಪ ಖನಗಾಂವಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇನ್ನು ಶಂಕ್ರಪ್ಪ ಮಲ್ಲಸರ್ಜ ಉರ್ಪ್ ಮಲ್ಲಪ್ಪ ಖನಗಾಂವಿ, ಶಶಿಧರ ಮಲ್ಲಸರ್ಜ ಉರ್ಪ್ ಮಲ್ಲಪ್ಪ ಖನಗಾಂವಿ, ಮಲ್ಲಸರ್ಜ ಉರ್ಪ್ ಮಲ್ಲಪ್ಪ ಶಂಕ್ರಪ್ಪ ಖನಗಾಂವಿ ಹಾಗೂ ಮೀನಾಕ್ಷಿ ಮಲ್ಲಸರ್ಜ ಉರ್ಪ್ ಮಲ್ಲಪ್ಪ ಖನಗಾಂವಿ ಅವರಿಗೆ ತಲಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದು, ಆರೋಪಿತರಿಂದ ಒಟ್ಟು ₹1.22 ಲಕ್ಷ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಸೆ.22 ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.