ಕಾಗವಾಡ : ಬರ ಹಾಗೂ ವಿದ್ಯುತ್ ಸಮಸ್ಯೆ ಖಂಡಿಸಿ ಕಾಗವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಹೇಶ ಕುಮಠಳ್ಳಿ, ( Mahesh kumatalli ) ಸಚಿವ ಲಕ್ಷ್ಮಣ ಸವದಿ ( Laxman Savadi ) ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಶಾಸಕನಾಗಿದ್ದ ವೇಳೆ ಲಕ್ಷ್ಮಣ ಸವದಿ ಅವರು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ “ರೈತರಿಗೆ ವಿದ್ಯುತ್ ನೀಡಿ, ಇಲ್ಲವೇ ಬಳೆ ಹಾಕಿಕೊಳ್ಳಿ” ಎಂದು ಸವಾಲು ಹಾಕಿದ್ದರು ಎಂದು ನೆನಪಿಸಿದ ಕುಮಠಳ್ಳಿ, ಇದೀಗ ನೀವು ಕಾಂಗ್ರೆಸ್ ಸರ್ಕಾರದಲ್ಲಿದ್ದೀರಿ, “ಬಳೆ ತಯಾರ್ ಇದಾವ್, ಹಾಕೊಳ್ಳಕ್ ತಯಾರಾಗ್ರಿ” ಎಂದು ವೇದಿಕೆಯಲ್ಲೇ ವ್ಯಂಗ್ಯವಾಡಿದರು.
“ಅಂದು ನೀವು ಹೇಳಿದ ಮಾತು ಈಗ ನಿಮಗೇ ಅನ್ವಯವಾಗುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ನೀಡಬೇಕು ಎಂದು ಆಗ ಸವಾಲು ಹಾಕಿದ್ದ ನೀವು, ಈಗ ಅದೇ ಸಮಸ್ಯೆ ಎದುರಾದಾಗ ನಿಮ್ಮ ಮಾತನ್ನೇ ಮರೆತಿದ್ದೀರಾ?” ಎಂದು ಕುಮಠಳ್ಳಿ ಪ್ರಶ್ನಿಸಿದರು.
ಕಾಗವಾಡ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ರೈತರಿಗೆ ನಿರಂತರ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.




