ಬೆಳಗಾವಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ.
ಕೆಎಲ್ಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ, ಕೆಲ್ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ.
ಶುಕ್ರವಾರ ರಾತ್ರಿ ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ತಂಗಿದ್ದ ಅವರು, ಶನಿವಾರ ಬೆಳಗ್ಗೆ ಕೆ.ಎಲ್.ಇ. ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ ಅನಾರೋಗ್ಯಕ್ಕೆ ಒಳಗಾದ ಕಾರಣದಿಂದ ಅವರು ಹೋಟೆಲ್ ನಲ್ಲೇ ಉಳಿದುಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಈರಣ್ಣ ಕಡಾಡಿ, ಅಭಯ ಪಾಟೀಲ, ರಮೇಶ ಕತ್ತಿ ಹೋಟೆಲ್ ಗೆ ತೆರಳಿ ಅಮಿತ್ ಶಾ ಆರೋಗ್ಯ ವಿಚಾರಿಸಿ ಬಳಿಕ ಆಸ್ಪತ್ರೆ ಉದ್ಘಾಟನೆ ಸಮಾರಂಭಕ್ಕೆ ತೆರಳಿದರು.




