ಬೆಳಗಾವಿ : ಆಸ್ತಿ ಪಾಲು ವಿಚಾರವಾಗಿ ಕುಟುಂಬದ ನಡುವೆ ನಡೆಯುತ್ತಿದ್ದ ವಿವಾದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲೇ ತಂದೆ, ಮಗಳ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಘಟನೆಯಲ್ಲಿ ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಮೃತಪಟ್ಟಿದ್ದಾರೆ. ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮ ಪಂಚಾಯತಿಯಲ್ಲೇ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ.ಆಸ್ತಿ ಪಾಲಿಗೆ ಸಂಬಂಧಿಸಿದಂತೆ ರುದ್ರಪ್ಪ ಹಾಗೂ ಅವರ ಸಹೋದರರ ನಡುವೆ ಹಲವು ದಿನಗಳಿಂದ ವಿವಾದವಿತ್ತು. ಬುಧವಾರ ಜಮೀನು ದಾಖಲೆ ಪ್ರಕ್ರಿಯೆಗಾಗಿ ರುದ್ರಪ್ಪ ಅವರು ಗ್ರಾ.ಪಂ ಗೆ ಬಂದಿದ್ದರು.
ಈ ವಿಚಾರ ತಿಳಿದ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಪಂಚಾಯತಿಗೆ ಬಂದು ದಾಳಿ ನಡೆಸಿದ್ದಾರೆ.
ಆರೋಪಿಗಳು ಕೊಡಲಿ ಹಾಗೂ ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ರುದ್ರಪ್ಪ ಅವರ ಮೇಲೆ ದಾಳಿ ನಡೆಸಿದ್ದಾರೆ. ಪಂಚಾಯತಿ ಆವರಣದಲ್ಲೇ ರುದ್ರಪ್ಪ ಅವರ ಹತ್ಯೆ ನಡೆದಿದೆ.
ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ದಾಳಿ ನಡೆಸಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಯುವತಿಯ ಜಡೆ ಕತ್ತರಿಸಿ ಕುಡಗೋಲಿನಿಂದ ಹಲ್ಲೆ ನಡೆಸಲಾಗಿದೆ. 38 ಗುಂಟೆ ಜಮೀನು ಹಂಚಿಕೆ ವಿಚಾರದಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




