ಬೆಳಗಾವಿ : ರಾಮದುರ್ಗ ಜನರ ಪ್ರೀತಿ ನನ್ನ ಮೇಲೆ‌ ಹೆಚ್ಚಾಗಿದೆ. ಹಾಗಾಗಿ ರಾಮದುರ್ಗ ಕಾರ್ಯಕ್ರಮಕ್ಕೆ ಹೆಚ್ಚು ಆಹ್ವಾನ ಬರುತ್ತಿವೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಯಾವತ್ತೂ ದ್ರೋಹ ಮಾಡುವುದಿಲ್ಲ. ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ತಾಲೂಕಿನ ಹೊಸ ಮುಖಕ್ಕೆ ಅವಕಾಶ ಸಿಗಲಿದೆ ಎಂದು ಅಚ್ಚರಿ ಹೇಳಿಕೆಯನ್ನು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.‌

ಹೌದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೊಟ್ಟ ಈ ಒಂದು ಹೇಳಿಕೆ ಸಧ್ಯ ರಾಮದುರ್ಗ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಹುಟ್ಟುಹಾಕಿದೆ. ಹಾಗಾದರೆ ಬಾಲಚಂದ್ರ ಜಾರಕಿಹೊಳಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡಯಲು ಪ್ಲ್ಯಾನ್ ಹಾಕಿದರಾ ಎಂಬ ಚರ್ಚೆ ಹುಟ್ಟುಹಾಕಿದೆ.

ಹೌದು ಕಳೆದ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ‌ ಶಾಸಕ‌ ಬಾಲಚಂದ್ರ ಜಾರಕಿಹೊಳಿ ಬಣದ ಅಭ್ಯರ್ಥಿ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ತಮ್ಮ ಸಹೋದರನನ್ನು ಚುನಾವಣಾ ಕಣಕ್ಕೆ ಇಳಿಸಿ ಗೆಲುವು ಸಾಧಿಸುವಂತೆ ಮಾಡಿದ್ದರು.

ಇನ್ನೂ ಸಾಹುಕಾರ್ ವಿರುದ್ಧದ ಬಣಕ್ಕೆ ಹಾಲಿ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ ಅವರೂ ಬಾಹ್ಯ ಬೆಂಬಲ‌ ನೀಡಿದ್ದು ಗುಟ್ಟಾಗಿ ಉಳಿದಿಲ್ಲ. ಆದರೆ ಈಗ ಬಾಲಚಂದ್ರ ಜಾರಕಿಹೊಳಿ ಬಿಜೆಪಿಗೆ ಯುವ ಮುಖ‌ ಎಂಬ ಹೇಳಿಕೆ ಸಾಕಷ್ಟು ಸದ್ದು ಮಾಡಿದ್ದು ಒಂದೇ ‌ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಆದರೆ ಬಾಲಚಂದ್ರ ಜಾರಕಿಹೊಳಿ ಕೊಟ್ಟ ಸವಾಲನ್ನು ಪಟ್ಟಣ ಹಾಗೂ ಯಾದವಾಡ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಹಿಂದೆ ಅಪರಿಚಿತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದ ಬಿಜೆಪಿ ಕೈ ಸುಟ್ಟುಕೊಂಡಿತ್ತು. ಹಾಗೆಯೇ ಯಾದವಾಡ ಕುಟುಂಬವನ್ನು ನಿರ್ಲಕ್ಷಿಸಿ ಬಿಜೆಪಿ ರಾಜಕಾರಣ ಮಾಡುವುದೂ ಅಷ್ಟೊಂದು ಸುಲಭದ ವಿಷಯವಲ್ಲ.